

ಚಿತ್ರದುರ್ಗ: ರಾಜ್ಯಸರ್ಕಾರದ ನಿರ್ಧಾರದಂತೆ ಹಾಲು ಉಚಿತ ವಿತರಣೆಗೆ ಶುಕ್ರವಾರ ಚಾಲನೆ ದೊರೆತಿದ್ದು, ಜಿಲ್ಲೆಯ 3120 ಬಡ ಕುಟುಂಬಗಳಿಗೆ ತಲಾ ಒಂದು ಲೀ. ಹಾಲು ವಿತರಿಸಲಾಯಿತು.
ಏ.14 ರ ವರೆಗೆ ಬಡವರು, ಕೂಲಿ ಕಾರ್ಮಿಕರು, ಲಾಕ್‌ಡೌನ್ ಕಾರಣದಿಂದಾಗಿ ಪುನರ್ವಸತಿಗೆ ಒಳಗಾದವರು, ಕೊಳೆಗೇರಿಗಳಿಗೆ ಆಹಾರ ಭದ್ರತೆ ಕಲ್ಪಿಸಲು ಈಗಾಗಲೇ ಉಚಿತವಾಗಿ ಆಹಾರ ಧಾನ್ಯ ವಿತರಿಸಲಾಗುತ್ತಿದ್ದು, ಆ ಪಟ್ಟಿಗೆ ಈಗ ಹಾಲು ಸೇರ್ಪಡೆಯಾಗಿದೆ.
ಹಾಲು ಒಕ್ಕೂಟದಲ್ಲಿ ಶೇಖರಣೆಯಾಗುವ ಹೆಚ್ಚುವರಿ ಹಾಲಿನ ಸದ್ಬಳಕೆ ಹಾಗೂ ಹೈನುಗಾರರಿಗೆ ಆರ್ಥಿಕ ಬೆಂಬಲದ ಉದ್ದೇಶದಿಂದ ಜಾರಿಗೊಂಡ ಈ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ಕೃಷ್ಣಪ್ಪ ನೋಡಲ್ ಅಧಿಕಾರಿಯಾಗಿದ್ದಾರೆ.
ಜಿಲ್ಲೆಯಲ್ಲಿ ನಿತ್ಯ 20 ಸಾವಿರ ಲೀ. ಹಾಲು ವಿತರಿಸುವ ಗುರಿ ಇದೆ. ಮೊದಲ ದಿನ ಚಿತ್ರದುರ್ಗ ತಾಲೂಕು 1570, ಚಳ್ಳಕೆರೆ-1000, ಹೊಸದುರ್ಗ-500 ಹಾಗೂ ಹಿರಿಯೂರು-100 ಲೀ.ಹಾಲು ವಿತರಿಸಲಾಗಿದೆ.
ಹೊಳಲ್ಕೆರೆ ಹಾಗೂ ಮೊಳಕಾಲ್ಮೂರು ತಾಲೂಕುಗಳಲ್ಲಿ ಶನಿವಾರದಿಂದ ವಿತರಿಸಲಾಗುವುದು. ದುರ್ಬಳಕೆ ತಡೆಗೆ ಹಾಲಿನ ಪ್ಯಾಕೆಟ್ ಮೇಲೆ ಕೋವಿಡ್-19 ಮಾರಾಟಕ್ಕೆ ಅಲ್ಲ, ಉಚಿತ ವಿತರಣೆ ಯೋಜನೆಗಾಗಿ ಎಂಬ ಮೊಹರು ಹಾಕಲಾಗಿದೆ. ಇದಕ್ಕೆ ತಗಲುವ ವೆಚ್ಚದ ಮೊತ್ತವನ್ನು ಕೆಎಂಎಫ್‌ಗೆ ರಾಜ್ಯಸರ್ಕಾರ ಭರಿಸಲಿದೆ.