

ಚಿತ್ರದುರ್ಗ: ಲಾಕ್‌ಡೌನ್‌ನಿಂದಾಗಿ ವೈದ್ಯಕೀಯ ತುರ್ತು ಪ್ರಯಾಣ ಸಮಸ್ಯೆ ಬಗೆಹರಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡುವುದಾಗಿ ಸಂಸದ ಎ.ನಾರಾಯಣ ಸ್ವಾಮಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ಬಳಿಕ ಮಾತನಾಡಿ, ವೈದ್ಯಕೀಯ ಸೇವೆಗಳಿಗಾಗಿ ಬೇರೆಡೆ ಹೋಗುವಂಥ ಪ್ರಯಾಣಿಕರಿಗೆ ಪಾಸ್ ಕೊಟ್ಟಿದ್ದರೂ ಮತ್ತೊಂದು ಜಿಲ್ಲಾ ಗಡಿಗಳಲ್ಲಿ ಮಾನ್ಯ ಮಾಡುತ್ತಿಲ್ಲವೆಂಬ ವಿಚಾರ ಗಮನಕ್ಕೆ ಬಂದಿದ್ದು, ಸಮಸ್ಯೆ ಬಗೆಹರಿಸುವಂತೆ ರಾಜ್ಯ ಸರ್ಕಾರವನ್ನು ಕೋರುವುದಾಗಿ ಹೇಳಿದರು.
25 ಲಕ್ಷ ರೂ. ನೆರವು: ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಅಗತ್ಯವಿರುವ ಎನ್-95 ಮಾಸ್ಕ್, ಸುರಕ್ಷತಾ ಕಿಟ್, ಹ್ಯಾಂಡ್‌ಗ್ಲೌಸ್, ನಗರದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಸೆಂಟ್ರಲ್ ಆಕ್ಸಿಜನ್ ವ್ಯವಸ್ಥೆ ಸಹಿತ ತುರ್ತು ಅಗತ್ಯಕ್ಕಾಗಿ ಎಂಪಿ ಲಾಡ್‌ನಿಂದ 25 ಲಕ್ಷ ರೂ. ಕೊಟ್ಟಿರುವುದಾಗಿ ತಿಳಿಸಿದರು.
ಬೆಂಗಳೂರಿಂದ ಹಿಂತಿರುಗಿರುವವರ ಪೈಕಿ ಹಲವರು ತಮ್ಮ ಗ್ರಾಮಗಳಲ್ಲಿ ಜೂಜಾಟಕ್ಕೆ ಕುಮ್ಮಕ್ಕೂ ಕೊಡುತ್ತಿದ್ದಾರೆ ಎಂಬ ದೂರುಗಳಿದ್ದು, ಸೂಕ್ತ ಕ್ರಮಕ್ಕೆ ಹಾಗೂ ಪಡಿತರ ವಿತರಣೆ, ಅಂಗನವಾಡಿ ಮಕ್ಕಳಿಗೆ ಆಹಾರ ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ಜಾಗ್ರತೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.
ಡಿಸಿ ಆರ್.ವಿನೋತ್ ಪ್ರಿಯಾ ಮಾತನಾಡಿ, ಏ.1ರಿಂದ ಪಡಿತರ ವಿತರಣೆ ಪ್ರಾರಂಭಿಸಲಾಗುವುದು. ಬಯೋಮೆಟ್ರಿಕ್ ಪಡೆಯುವಂತಿಲ್ಲ. ಒಟಿಪಿ ಪಡೆದರೆ ಸಾಕು. ಒಂದು ವೇಳೆ ಒಟಿಪಿ ಬರದಿದ್ದರೂ ಪಡಿತರ ವಿತರಿಸಲು ಸೂಚಿಸಿರುವುದಾಗಿ ತಿಳಿಸಿದರು.
ಜಿಪಂ ಸಿಇಒ ಎಸ್.ಹೊನ್ನಾಂಬ, ಸಿಪಿಒ ಟಿ.ಶಶಿಧರ್, ಎಸ್ಪಿ ಜಿ.ರಾಧಿಕಾ, ಎಎಸ್ಪಿ ಎಂ.ಬಿ.ನಂದಗಾವಿ, ಎಡಿಸಿ ಸಿ.ಸಂಗಪ್ಪ, ಎಸಿ ವಿ.ಪ್ರಸನ್ನ, ಡಿಎಚ್‌ಒ ಡಾ.ಸಿ.ಎಲ್.ಫಾಲಾಕ್ಷ, ಡಿಎಸ್ ಡಾ.ಎಚ್.ಜೆ.ಬಸವರಾಜಪ್ಪ ಮತ್ತಿತರರಿದ್ದರು.
ಲಾಕ್‌ಡೌನ್ ಆಗದಿದ್ರೆ ಇಟಲಿ ಆಗುತ್ತಿತ್ತು: ಪ್ರಧಾನಿ ನರೇಂದ್ರ ಮೋದಿ ಲಾಕ್‌ಡೌನ್ ಘೋಷಿಸದೇ ಇದ್ದಿದ್ದರೆ ಈ ಹೊತ್ತಿಗೆ ಭಾರತವೂ ಇಟಲಿ ಮತ್ತಿತರ ದೇಶಗಳ ಸಾಲಿನಲ್ಲಿರುತ್ತಿತ್ತು. ಪ್ರಧಾನಿ ಒಳ್ಳೆ ಕೆಲಸ ಮಾಡಿದ್ದಾರೆ. ಜಿಲ್ಲಾಡಳಿತವೂ ಉತ್ತಮ ಕೆಲಸ ಮಾಡುತ್ತಿದೆ. ಜಿಲ್ಲೆಯ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತ್ತಿತರ ನೌಕರರು ಪ್ರಾಣ ಲೆಕ್ಕಿಸದೆ ಸಮರ್ಪಣಾ ಮನೋಭಾವದಿಂದ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದರು ಮೆಚ್ಚುಗೆ ವ್ಯಕ್ತಪಡಿಸಿದರು.