

ಚಿತ್ರದುರ್ಗ: ಸರ್ವ ಕ್ಷೇತ್ರದಲ್ಲಿ ಅತ್ಯಂತ ಹಿಂದುಳಿದಿರುವ ಅಲಕ್ಷಿತ ತಳ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಸರ್ವರೂ ಶ್ರಮಿಸಬೇಕು ಎಂದು ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಅಲಕ್ಷಿತ ಸಮುದಾಯಗಳ ಸಮಾವೇಶ, ವಿಚಾರ ಸಂಕಿರಣ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಶೋಷಿತರ ಪ್ರಗತಿ ಮಠಾಧೀಶರು, ರಾಜಕಾರಣಿಗಳ ಹೊಣೆಗಾರಿಕೆ ಆಗಬೇಕು. 12ನೇ ಶತಮಾನದಲ್ಲಿ ಬಸವಣ್ಣನವರು ಅಲಕ್ಷಿತ ವರ್ಗಗಳಿಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಹಲವಾರು ಶಿವಶರಣರು ಬೆಳಕಿಗೆ ಬಂದರು ಎಂದರು.
ಆಳುವ ವರ್ಗ ಅಲಕ್ಷಿತ ಸಮುದಾಯಗಳನ್ನು ಮುಖ್ಯವಾಹಿನಿಗೆ ತರಲು ವಿಶೇಷ ಯೋಜನೆಗಳನ್ನು ರೂಪಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಚಳ್ಳಕೆರೆ ಕ್ಷೇತ್ರ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಶೋಷಿತ ವರ್ಗದ ಪ್ರಗತಿಗೆ ಶಿಕ್ಷಣವೇ ಪ್ರಮುಖ ಅಸ್ತ್ರ. ಈ ನಿಟ್ಟಿನಲ್ಲಿ ನಾವೆಲ್ಲರೂ ಜಾಗೃತರಾಗಬೇಕು ಎಂದು ಹೇಳಿದರು.
ಸಮ ಸಮಾಜ ನಿರ್ಮಾಣಗೊಳ್ಳುವಲ್ಲಿ ಅಲಕ್ಷಿತರ ಅಭಿವೃದ್ಧಿ ಬಹುಮುಖ್ಯ. ಎಲ್ಲ ಸ್ಥರದ ಜನತೆ ಮುಖ್ಯವಾಹಿನಿಗೆ ಬಂದಾಗ ಮಾತ್ರ ದೇಶದ ಸಮಗ್ರ ಪ್ರಗತಿ ಸಾಧ್ಯ ಎಂದರು.
ಮಾಜಿ ಸಂಸದ ಬಿ.ಎನ್.ಚಂದ್ರಪ್ಪನವರು ಮಾತನಾಡಿ, ಅಲಕ್ಷಿತರು ಕೀಳಿರಿಮೆ ತೊರೆದು ಸರ್ವ ಕ್ಷೇತ್ರದಲ್ಲೂ ಪ್ರಗತಿ ಸಾಧಿಸಲು ಹೆಚ್ಚು ಆಸಕ್ತಿ ಹೊಂದಬೇಕು ಎಂದು ತಿಳಿಸಿದರು.
ಶಾಂತಿ ಮತ್ತು ಸೌಹಾರ್ಧ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್ ಕುಮಾರ್ ಮಾತನಾಡಿ, ಎಲ್ಲ ವರ್ಗದ ಮಕ್ಕಳಿಗೆ ಶಿಕ್ಷಣ ಜತೆಗೆ ಉದ್ಯೋಗ ಕಲ್ಪಿಸಲು ಸರ್ಕಾರ ಚಿಂತನೆ ನಡೆಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಪಂ ಸದಸ್ಯ ಬಿ.ಪಿ.ಪ್ರಕಾಶ್ ಮೂರ್ತಿ, ವೇದಿಕೆ ಸಂಸ್ಥಾಪಕ ಟಿ.ತಿಪ್ಪೇಸ್ವಾಮಿ ಸಂಪಿಗೆ, ಜಿಲ್ಲಾ ಕೊರಮ ಸಂಘದ ಅಧ್ಯಕ್ಷ ಕೆ.ಕೃಷ್ಣಪ್ಪ, ವಕೀಲ ಬಿ.ಕೆ.ರಹವತ್ ವುಲ್ಲಾ, ದಲಿತ ವಿಮೋಚನೆ ಮಾನವ ಹಕ್ಕುಗಳ ವೇದಿಕೆ ಸಂಚಾಲಕ ಭೀವನಕೆರೆ ಶಿವಮೂರ್ತಿ, ಮಾದಿಗ ನೌಕರರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್ ಮೂರ್ತಿ ಮಾತನಾಡಿದರು.
ಕುಂಬಾರ ಸಮಾಜದ ಮುಖಂಡ ಹುಲುಗಪ್ಪ, ಸವಿತಾ ಸಮಾಜದ ಮಹಿಳಾ ಅಧ್ಯಕ್ಷೆ ಜೆ.ಕವಿತಾ ಶ್ಯಾಮ್ ಇತರರು ಉಪಸ್ಥಿತರಿದ್ದರು.
ರಾಷ್ಟ್ರೀಯ ಕಬ್ಬಡಿ ಕ್ರೀಡಾಪಟು ಎನ್.ಹರ್ಷವರ್ಧನ್, ಕಾರ್ಗಿಲ್ ಯೊಧ ನರಸಿಂಹ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಜ್ಯೋತಿ ಪ್ರಾರ್ಥಿಸಿದರು. ಟಿಪ್ಪು ಸುಲ್ತಾನ್ ಯುವ ವೇದಿಕೆ ಅಧ್ಯಕ್ಷ ಎಂ.ಹನೀಫ್ ಸ್ವಾಗತಿಸಿದರು. ಶಿಕ್ಷಕ ಪರಮೇಶ್ವರಪ್ಪ ಕುದುರಿ ನಿರೂಪಿಸಿದರು. ಚಳ್ಳಕೆರೆ ಸುಧಾ ವಂದಿಸಿದರು.
ಅಂಕ ಗಳಿಕೆಯಷ್ಟೇ ಗುರಿ ಆಗದಿರಲಿ: ಅಂಕ ಗಳಿಕೆಗೆ ಮಾತ್ರ ಒತ್ತು ನೀಡದೇ, ಸಂಸ್ಕಾರ, ಸಂಸ್ಕೃತಿಗಳನ್ನು ಮೈಗೂಡಿಸಿಕೊಳ್ಳಬೇಕು. ಸಂಸ್ಕಾರವಿಲ್ಲದಾ ವಿದ್ಯೆ, ಅಂಕಗಳು ಉಪಯೋಗಕ್ಕೆ ಬರುವುದಿಲ್ಲ ಎಂದು ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಹೇಳಿದರು. ಪ್ರಸ್ತುತ ದಿನಗಳಲ್ಲಿ ಹೆಚ್ಚು ವಿದ್ಯಾಭ್ಯಾಸ ಮಾಡಿದವರೇ ಹೆಚ್ಚು ಹೆಚ್ಚು ಅಪರಾಧ ಪ್ರಕರಣಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಇದು ಅಪಾಯಕಾರಿ ಬೆಳವಣಿಗೆ. ಈ ಕಾರಣಕ್ಕೆ ಶಿಕ್ಷಣದ ಜತೆ ಸಂಸ್ಕಾರ ಕಲಿಸುವುದು ಅಗತ್ಯವಾಗಿದೆ ಎಂದರು.