ಲಾಕ್‌ಡೌನ್ ನಿಯಮ ಪಾಲಿಸಿ ಮದುವೆ

CTD 06 MURUGA
Published on

ಚಿತ್ರದುರ್ಗ: ಮುರುಘಾಮಠ ಕಳೆದ 30 ವರ್ಷಗಳಿಂದ ಪ್ರತಿ ತಿಂಗಳು 5 ರಂದು ಚಾಚೂ ತಪ್ಪದೆ ನಡೆಸಿಕೊಂಡು ಬಂದಿರುವ ಸಾಮೂಹಿಕ ವಿವಾಹಕ್ಕೆ ಅಡ್ಡಿ ಪಡಿಸುವ ಶಕ್ತಿ ಕರೊನಾಗೂ ಇಲ್ಲದಂತಾಯಿತು.

ಏಪ್ರಿಲ್ 5 ರಂದು ಮಠದಲ್ಲಿ ನಡೆಯಬೇಕಿದ್ದ ಸಾಮೂಹಿಕ ವಿವಾಹವನ್ನು ಲಾಕ್‌ಡೌನ್ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಇದಕ್ಕೂ ಮುಂಚೆ ಹೆಸರು ನೋಂದಾಯಿಸಿದ್ದ 18 ವಧು ವರರ ಪೋಷಕರಿಗೆ ಪೋನ್ ಮೂಲಕ ಈ ಮಾಹಿತಿ ತಿಳಿಸಲಾಗಿತ್ತು.

ಆದರೂ ಭಾನುವಾರ ಬೆಳಗ್ಗೆ ಮೂರು ಜೋಡಿಗಳ ಜತೆ ಮಠಕ್ಕೆ ಆಗಮಿಸಿದ ಅವರ ತಂದೆ ತಾಯಿಗಳು ನಮ್ಮ ಮಕ್ಕಳ ವಿವಾಹಕ್ಕೆ ಆಶೀರ್ವದಿಸುವಂತೆ ಬೇಡಿಕೊಂಡರು.

ಹೀಗಾಗಿ ಎಲ್ಲೂ ಸರ್ಕಾರದ ಆದೇಶ ಉಲ್ಲಂಘನೆ ಆಗದಂತೆ 30ನೇ ವರ್ಷದ 4ನೇ ತಿಂಗಳ ಸಾಮೂಹಿಕ ವಿವಾಹವನ್ನು ಸರಳವಾಗಿ ಆಯೋಜಿಸಲು ಶರಣರು ಒಪ್ಪಿದರು.

ವಧು-ವರರು, ಅವರ ತಂದೆ ತಾಯಿ ಹೊರತುಪಡಿಸಿ ಬೇರೆಯವರಾರೂ ವಿವಾಹಕ್ಕೆ ಆಗಮಿಸಿರಲಿಲ್ಲ. ಮೂರು ಜೋಡಿಗಳಿಂದ 17 ಜನ ಭಾಗವಹಿಸಿದ್ದರು. ಎಲ್ಲರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಪ್ರತಿಯೊಬ್ಬರಿಗೂ ಸ್ಯಾನಿಟೈಸರ್ ಹಾಗೂ ಮಾಸ್ಕ್ ವಿತರಿಸಲಾಯಿತು.

ಡಾ.ಶಿವಮೂರ್ತಿ ಮುರುಘಾ ಶರಣರು ವಧು-ವರರಿಗೆ ತಾಳಿ,ಬಟ್ಟೆ ಕೊಡುವುದರೊಂದಿಗೆ ಪುಷ್ಪಾರ್ಚನೆ ಮಾಡಿ ಆಶೀರ್ವದಿಸಿದರು.

ಎಮ್ಮವರು ಬೆಸಗೊಂಡಡೆ ಶುಭ ಲಗ್ನವೆನ್ನಿರಯ್ಯ ಎಂಬ ವಚನದೊಂದಿಗೆ ಸರಳವಾಗಿ ಐದು ನಿಮಿಷಗಳಲ್ಲಿ ಮದುವೆ ಮುಕ್ತಾಯಗೊಳಿಸಿದರು. ಎಸ್‌ಜೆಎಂ ವಿದ್ಯಾಪೀಠದ ಕಾರ್ಯರ್ಶಿ ಎ. ಜೆ. ಪರಮಶಿವಯ್ಯ, ಮುಖ್ಯಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ಆರ್. ಲಿಂಗರಾಜು ಇದ್ದರು. ಜಮುರಾ ಕಲಾವಿದರು ವಚನ ಗಾಯನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net