ಸಂತೆಗಳಿಗೆ ಇರಲಿಲ್ಲ ನಿಷೇಧಾಜ್ಞೆ ಚಿಂತೆ

ctd 23 sante
Published on

ಚಿತ್ರದುರ್ಗ: ರಾಜ್ಯದಲ್ಲಿ ತನ್ನ ಕಬಂಧ ಬಾಹುವನ್ನು ಚಾಚುತ್ತಿರುವ ಕರೊನಾ ಸೋಂಕಿನಿಂದಾಗಿ ಇಡೀ ರಾಜ್ಯವೇ ಲಾಕ್‌ಔಟ್ ಆಗಿದೆ.

ಅದರೆ, ಚಿತ್ರದುರ್ಗದಲ್ಲಿ ಮಾತ್ರ ಜನತಾ ಕರ್ಫ್ಯೂ ಆದ ಮರು ದಿನ ಸೋಮವಾರ ಮುಂಜಾನೆಯೇ, 144 ನಿಷೇಧಾಜ್ಞೆಯನ್ನು ಲೆಕ್ಕಿಸದೆ ನಗರದಲ್ಲಿ ಮಾರುಕಟ್ಟೆಗಳಲ್ಲಿ ಜನದಟ್ಟಣೆ ಅಧಿಕವಾಗಿ ಸೇರಿತ್ತು.

ಬುಧವಾರ ಯುಗಾದಿ ಹಬ್ಬದ ಕಾರಣಕ್ಕೆ ಹಾಗೂ ಲಾಕ್‌ಡೌನ್ ಆದರೆ ಏನು ಗತಿ ಎಂದು ಅವಶ್ಯ ವಸ್ತುಗಳ ಖರೀದಿಗೆ ಜನ ಬೀದಿಗೆ ಅಂಗಡಿ ಮುಂಗಟ್ಟುಗಳಿಗೆ ಮುಗಿ ಬಿದ್ದಿದ್ದರು. ಪರಿಸ್ಥಿತಿ ಲಾಭ ಪಡೆದ ಕೆಲ ವರ್ತಕರು ತರಕಾರಿ ದರದಲ್ಲಿ ಏರಿಕೆ ಮಾಡಿದ್ದರು. ಕೇಳಿದರೆ ಬೇರೆಡೆಯಿಂದ ತರಕಾರಿ ಬಂದಿಲ್ಲ ಎಂಬ ಸಿದ್ಧ ಉತ್ತರವಿತ್ತು.

ಎರಡೂವರೆ ಕೆಜಿಗೆ 30 ರೂ. ಆಸುಪಾಸಿನಲ್ಲಿ ಮಾರಾಟವಾಗುತ್ತಿದ್ದ ಹಸಿಮೆಣಿಸಿನಕಾಯಿ ದರ ಕೆ.ಜಿ.ಗೆ 120 ರೂ. ತಲುಪಿತ್ತು. ಈರುಳ್ಳಿ 20-25 ರೂ. ಅಂಚಿನಲ್ಲಿದ್ದರೆ ಕ್ಯಾರೆಟ್, ಬೀನ್ಸ್ ಮೊದಲಾದ ತರಕಾರಿಗಳು ದರದಲ್ಲಿ ಏರಿಕೆ ಇತ್ತು.

ಹಬ್ಬಕ್ಕೆ ಅವಶ್ಯವಿರುವ ತೆಂಗಿನಕಾಯಿ, ಬಾಳೆ ಹಣ್ಣು, ಕರಿಬೇವು, ಕೊತಂಬರಿ, ಹೊಸ ಬಟ್ಟೆ, ದಿನಸಿ, ಉಡುದಾರ ಮೊದಲಾದವುಗಳನ್ನು ಖರೀದಿಸಲು ಸಂತೆಹೊಂಡ, ಸಂತೆ ಮೈದಾನ, ಲಕ್ಷ್ಮೀ ಬಜಾರ್ ಸೇರಿ ವಾಣಿಜ್ಯ ಸ್ಥಳಗಳು ಜನದಟ್ಟಣೆಯಿಂದ ಕೂಡಿದ್ದು, ಕರೊನಾ ಭೀತಿ ಎಲ್ಲಿದೆ ಎಂಬಂಥ ಪ್ರಶ್ನೆಯನ್ನು ಹುಟ್ಟು ಹಾಕಿತು.

ರೈಲು ಹಾಗೂ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಇರದ ಕಾರಣ ಖಾಸಗಿ ಬಸ್‌ಗಳು ಭರ್ತಿಯಾಗಿ ಸಂಚರಿಸಿದವು.

ಇದು ಕಾನೂನು ಸುವ್ಯವಸ್ಥೆ ಪ್ರಶ್ನೆ ಅಲ್ಲ; ಡಿಸಿ ಬೇಸರ: ಸೋಂಕು ಹತೋಟಿಗೆ ಸಂತೆಗಳನ್ನು ನಿಷೇಧಿಸಲಾಗಿದೆ. ಆದರೂ ಉಲ್ಲಂಘಿಸಿ ಸಂತೆ ನಡೆಯುತ್ತದೆ ಎಂದಾದರೆ ಜನರಿಗೆ ಯಾವ ರೀತಿ ತಿಳಿಹೇಳಬೇಕು ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಬೇಸರಿಸಿದರು.

ಇದು ಕಾನೂನು ಸುವ್ಯವಸ್ಥೆಯ ಪ್ರಶ್ನೆ ಎನ್ನುವುದಕ್ಕಿಂತ ಸಾಮಾಜಿಕ ಹೊಣೆಗಾರಿಕೆ ಎಂಬುದನ್ನು ಎಲ್ಲರೂ ಅರಿಯಬೇಕು ಎಂದು ಮನವಿ ಮಾಡಿದರು.

ಇವತ್ತಿನ ಮಾರುಕಟ್ಟೆ ನೋಡಿದರೆ ಸೋಂಕು ಎಲ್ಲಿ ತೀವ್ರವಾಗುತ್ತದೆಯೋ ಎಂಬ ಆತಂಕವನ್ನು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net