ಅರಣ್ಯ ಸಿಬ್ಬಂದಿಗೆ ಚಿಟ್ಟಾನೆ ಚೆಳ್ಳೆಹಣ್ಣು

elephant 6c
Published on

ಚಿತ್ರದುರ್ಗ: ಹೊನ್ನಾಳಿ ಅರಣ್ಯ ಪ್ರದೇಶದಲ್ಲಿ ಕಳೆದ 7 ದಿನಗಳ ಹಿಂದೆ ಕಾಣಿಸಿದ್ದ ಗಂಡು ಮರಿಯಾನೆ ಇದೀಗ ಜಿಲ್ಲೆಯ ಹಿರಿಯೂರು ತಾಲೂಕು ಲಕ್ಕೇನಹಳ್ಳಿ, ಮಾರಿಕಣಿ ಕಣಿವೆ ಅರಣ್ಯ ಪ್ರದೇಶದಲ್ಲಿ ಸಂಚರಿಸುತ್ತಿದೆ.

ಹೊನ್ನಾಳಿ, ಸಂತೇಬೆನ್ನೂರು, ಚನ್ನಗಿರಿ ಅರಣ್ಯಗಳನ್ನು ಹಾದು ಹೊಳಲ್ಕೆರೆ ಮೂಲಕ ಜಿಲ್ಲೆಯ ಹಿರೆಕಂದವಾಡಿ ಅರಣ್ಯ ಭಾಗದಲ್ಲಿ 4 ದಿನಗಳ ಹಿಂದೆ ಪ್ರತ್ಯಕ್ಷವಾಗಿತ್ತು.

ಅಲ್ಲಿ ಅರಣ್ಯ ಸಿಬ್ಬಂದಿ ಕಣ್ಣಿಗೆ ಆನೆ ಮರಿ ಬಿದ್ದಿತ್ತು. ಆನಂತರದಲ್ಲಿ ಅದು ಎಲ್ಲೂ ಕೂಡ ನೇರವಾಗಿ ಗೋಚರಿಸಿಲ್ಲ. ಆದರೂ ಅದರ ಹೆಜ್ಜೆ ಜಾಡು ಹಿಡಿದು ಸಿಬ್ಬಂದಿ ಅದರ ಬೆನ್ನು ಬಿದ್ದಿದ್ದಾರೆ.

ಹೊಳಲ್ಕೆರೆ ಪ್ರದೇಶದಿಂದ ಚಿತ್ರದುರ್ಗ ಜೋಗಿಮಟ್ಟಿ ವನ್ಯಜೀವಿಧಾಮ ಕೆನ್ನಡಲು ಭಾಗದಿಂದ ವಿವಿ ಸಾಗರ ಅರಣ್ಯ ಪ್ರದೇಶವನ್ನು ತಲುಪಿದ್ದು, ಸೋಮವಾರ ರಾತ್ರಿ ಅದು ಮರಳಿ ಉಬ್ರಾಣಿ ಕಾಡಿನ ಮೂಲಕ ಭದ್ರಾ ಅಥವಾ ಹೊಸದುರ್ಗದ ಗಡಿ ಪ್ರದೇಶ ಲಕ್ಕೇನಹಳ್ಳಿ ಅರಣ್ಯದಿಂದ ತುಮಕೂರಿನ ಮೂಲಕ ಬನ್ನೇರುಘಟ್ಟದ ಆನೆಕಾರಿಡಾರ್ ಸೇರುವ ಸಾಧ್ಯತೆ ಇದೆ.

ಅತ್ಯಂತ ಚುರುಕಾಗಿದೆ: ಸದ್ಯಕ್ಕಂತೂ ಆನೆ ಅರಣ್ಯದಲ್ಲಿ ಸಂಚರಿಸುತ್ತಿದೆ. ಅದರ ಓಡಾಟ ಅತ್ಯಂತ ಚುರುಕಾಗಿದ್ದು, ನಮ್ಮ ಸಿಬ್ಬಂದಿ ಕಣ್ಣಿಗೆ ಬೀಳುತ್ತಿದ್ದಂತೆ ಕ್ಷಣಾರ್ಧದಲ್ಲಿ ಅಲ್ಲಿಂದ ಕಾಲ್ಕಿಳುತ್ತಿದೆ. ಸದ್ಯಕ್ಕಂತೂ ಯಾವುದೇ ಜೀವ ಹಾನಿ ಆಗಿಲ್ಲ. ಬೆಳೆ ನಷ್ಟವಾಗಿದ್ದರೆ ನಿಯಮಾನುಸಾರ ಪರಿಹಾರ ಕೊಡಲಾಗುವುದು. ಅರಣ್ಯದಂಚಿನ ಹಳ್ಳಿಗಳ ಗ್ರಾಮಸ್ಥರು ವಿಶೇಷವಾಗಿ ನಸುಕಿನಲ್ಲಿ ಮತ್ತು ಸಂಜೆ ಹೊತ್ತಿನಲ್ಲಿ ಎಚ್ಚರಿಕೆಯಿಂದ ಸಂಚರಿಸಬೇಕು ಎಂದು ಡಿಎಫ್‌ಒ ಚಂದ್ರಶೇಖರ್ ನಾಯಕ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net