

ಚಿತ್ರದುರ್ಗ: ಡಾ.ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವ ಮೂಲಕ ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಿಗೆ ಒತ್ತಾಯಿಸಿ ಹಲವು ಕನ್ನಡ ಪರ ಸಂಘಟನೆಗಳು ಗುರುವಾರ ಕರೆ ನೀಡಿದ್ದ ಕರ್ನಾಟಕ ಬಂದ್ ಚಿತ್ರದುರ್ಗದಲ್ಲಿ ಜರುಗಲಿಲ್ಲ.
ಬದಲಿಗೆ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ಡಿಸಿಗೆ ಮನವಿ ಸಲ್ಲಿಸಿದರು.
ಡಾ.ಸರೋಜಿನಿ ಮಹಿಷಿ ಸರ್ಕಾರಕ್ಕೆ ವರದಿ ಸಲ್ಲಿಸಿ 30 ವರ್ಷಗಳಾಗಿದ್ದರೂ ಅದನ್ನು ಜಾರಿಗೊಳಿಸುವಲ್ಲಿ ರಾಜ್ಯ ಸರ್ಕಾರ ಮೀನಾಮೇಷ ಎಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಆದ್ದರಿಂದ ಐಟಿ-ಬಿಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲು ಸಿಗಬೇಕು. ಆದ್ದರಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಹಿಷಿ ವರದಿ ಜಾರಿಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಸೇನೆ ಜಿಲ್ಲಾಧ್ಯಕ್ಷ ಕೆ.ರಾಮಚಂದ್ರ, ಮುಖಂಡರಾದ ಪಿ.ಎಂ.ತಿಪ್ಪೇಸ್ವಾಮಿ, ಚಂದ್ರಪ್ಪಘಾಟ್, ಪೂಜಾರ್ ಕರಿಯಪ್ಪ, ಮಹಮದ್ ರಫಿ, ಸೈಯದ್ ಮುಜಾಹಿದ್, ಆರ್.ರಾಘವೇಂದ್ರ, ದಾದಾಪೀರ್, ದುರ್ಗೆಶ್, ಇಮ್ರಾನ್, ದಸ್ತಗೀರ್ ಮತ್ತಿತರರು ಇದ್ದರು.
ಚಿತ್ರದುರ್ಗದಲ್ಲಿ ಬಂದ್ ಜರುಗದಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ಕೆಲ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.