ಕ್ಷೌರಿಕ, ಮಡಿವಾಳರಿಗೆ ಪರಿಹಾರ

ADC SANGAPPA (4)
Published on

ಚಿತ್ರದುರ್ಗ: ಲಾಕ್‌ಡೌನ್‌ನಿಂದಾಗಿ ದೈನಂದಿನ ಜೀವನಕ್ಕೆ ತೊಂದರೆ ಅನುಭವಿಸಿದ್ದ ಬಟ್ಟೆ ಸ್ವಚ್ಛ, ಇಸ್ತ್ರೀ ಮಾಡುವ ಮಡಿವಾಳ ಮತ್ತು ಕ್ಷೌರಿಕ ವೃತ್ತಿಯವರಿಗೆ ರಾಜ್ಯ ಸರ್ಕಾರ 5 ಸಾವಿರ ರೂ. ಪರಿಹಾರ ಘೋಷಿಸಿದ್ದು, ಫಲಾನುಭವಿಗಳು ಸೇವಾ ಸಿಂಧು ಮೂಲಕ ಜೂನ್ 30ರೊಳಗೆ ಅರ್ಜಿ ಸಲ್ಲಿಸುವಂತೆ ಎಡಿಸಿ ಸಿ.ಸಂಗಪ್ಪ ಹೇಳಿದರು.

ಎಸಿ ಕಚೇರಿಯಲ್ಲಿ ಗುರುವಾರ ಪರಿಹಾರ ವಿತರಿಸುವ ಕುರಿತ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ 60 ಸಾವಿರ ಬಟ್ಟೆ ಸ್ವಚ್ಛ, ಇಸ್ತ್ರೀ ಮಾಡುವ ಹಾಗೂ 2.30 ಲಕ್ಷ ಕ್ಷೌರಿಕ ವೃತ್ತಿಯವರು ಇದ್ದಾರೆ. ಇವರಿಗೆ ಪರಿಹಾರ ಕೊಡಲು ಸರ್ಕಾರ 145 ಕೋಟಿ ರೂ. ಮೀಸಲಿಟ್ಟಿದೆ. ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಏಕಗವಾಕ್ಷಿಯಡಿ ಅರ್ಜಿ ಸ್ವೀಕರಿಸಲು ವ್ಯವಸ್ಥೆ ಮಾಡಲಾಗುವುದು ಎಂದರು.

ಒಂದು ಕುಟುಂಬದಲ್ಲಿ 18ರಿಂದ 65 ವರ್ಷದೊಳಗಿರುವಂಥ ಒಬ್ಬರಿಗೆ ಪರಿಹಾರ ಕೊಡಲಾಗುವುದು. ಬಿಪಿಎಲ್ ಕಾರ್ಡ್ ಇರುವ ವಲಸೆ ಕಾರ್ಮಿಕರು ಕೂಡ ಅರ್ಜಿ ಸಲ್ಲಿಸಬಹುದು. ಬ್ಯಾಂಕ್ ಖಾತೆಯೊಂದಿಗೆ ಜೋಡಣೆಯಾಗಿರುವ ಆಧಾರ್ ಕಾರ್ಡ್, ವಿಳಾಸ, ಜನ್ಮ ದಿನಾಂಕ ದೃಢೀಕಣ, ಬಿಪಿಎಲ್ ಕಾರ್ಡ್, ಸ್ವಯಂ ಘೋಷಣೆ ಹಾಗೂ ಉದ್ಯೋಗ ಪ್ರಮಾಣ ಪತ್ರ ಸಲ್ಲಿಸಬೇಕು.

ಜಿಲ್ಲೆಯಲ್ಲಿ ಈವರೆಗೆ ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಿರುವ ಇವರ ಸಂಖ್ಯೆ ಬಹಳ ಕಡಿಮೆ ಇದೆ. 595 ಕ್ಷೌರಿಕರು, 709 ಮಡಿವಾಳರು ಸೇರಿ 1304 ಮಂದಿ ಕಾರ್ಮಿಕ ಇಲಾಖೆಯಲ್ಲಿ ನೊಂದಣಿ ಮಾಡಿಸಿದ್ದಾರೆ ಎಂದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ವಿನುತಾ, ಕಾರ್ಮಿಕ ನಿರೀಕ್ಷಕ ರಾಜಣ್ಣ, ಸವಿತಾ ಸಮಾಜ, ಹಡಪದ ಅಪ್ಪಣ್ಣ ಹಾಗೂ ಮಡಿವಾಳ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net