

ಚಿತ್ರದುರ್ಗ: ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ನಿರ್ಮಿಸಿರುವ ನಗರದ 2ನೇ ಸೋಂಕು ನಿವಾರಣಾ ಮಾರ್ಗವನ್ನು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಗುರುವಾರ ಉದ್ಘಾಟಿಸಿದರು.
ಈ ವೇಳೆ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ 2 ಸೋಂಕು ನಿವಾರಕ ಮಾರ್ಗಗಳ ನಿರ್ಮಾಣ ಬೇಡಿಕೆ ಇದೆ. ಜನದಟ್ಟಣೆ ಇರುವೆಡೆ ಮಾರ್ಗಗಳ ಸ್ಥಾಪನೆ ಅಗತ್ಯವಿದೆ. ಹಳೆಯ ಮಾಧ್ಯಮಿಕ ಶಾಲಾ ಆವರಣದಲ್ಲಿ 35 ಸಾವಿರ ರೂ. ವೆಚ್ಚದಲ್ಲಿ ಸೋಂಕು ನಿವಾರಕ ಮಾರ್ಗ ನಿರ್ಮಿಸಿರುವುದು ವಿಶೇಷವಾಗಿದೆ. ಜಿಲ್ಲೆಯಲ್ಲಿ ಮತ್ತೆ ಕರೊನಾ ಸೋಂಕು ಪತ್ತೆಯಾಗಿಲ್ಲ. ಆದರೂ ಸೋಂಕು ಹರಡುವಿಕೆ ತಡೆಗೆ ಲಾಕ್‌ಡೌನ್ ಬೆಂಬಲಿಸಬೇಕು. ಆ ಮೂಲಕ ಚಿತ್ರದುರ್ಗವನ್ನು ಕರೊನಾಮುಕ್ತವಾಗಿ ಕಾಪಾಡಿಕೊಳ್ಳಬೇಕೆಂದು ಆಶಿಸಿದರು.
ಜಿಲ್ಲಾಧಿಕಾರಿ ಆರ್. ವಿನೋತ್‌ಪ್ರಿಯಾ ಮಾತನಾಡಿ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕುಂದುಕೊರತೆಗಳ ಮಾಹಿತಿ ಸಂಗ್ರಹಕ್ಕೆ ಶಿಕ್ಷಕರನ್ನು ನಿಯೋಜಿಸಲಾಗುವುದು. ವರದಿ ಆಧರಿಸಿ ಸಮಸ್ಯೆ ನಿವಾರಿಸಲಾಗುವುದು. ಜಿಲ್ಲೆಯಲ್ಲಿ ಸೋಂಕು ಪತ್ತೆಯಾಗಿಲ್ಲ. ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಅಗತ್ಯ ವಸ್ತುಗಳ ಖರೀದಿ ಹೊರತುಪಡಿಸಿ ಉಳಿದ ಅವಧಿಯಲ್ಲಿ ಮನೆಯಿಂದ ಹೊರ ಬರಬಾರದು ಎಂದು ಮನವಿ ಮಾಡಿದರು.
ನಗರಸಭೆ ಪೌರಾಯುಕ್ತ ಜೆ.ಟಿ. ಹನುಮಂತರಾಜು ಮಾತನಾಡಿದರು. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ್, ನಗರಸಭೆ ಅಧಿಕಾರಿ, ಸಿಬ್ಬಂದಿ ಇದ್ದರು.