

ಚಿತ್ರದುರ್ಗ: ಮಕ್ಕಳು, ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಯುವ ಗೊಡವೆ ನಮಗ್ಯಾಕೆ ಎಂಬ ನಿರ್ಲಕ್ಷೃ ಬೇಡ ಎಂದು ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಬಿ.ವಸ್ತ್ರಮಠ ಹೇಳಿದರು.
ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ಸಂರಕ್ಷಿಸುವ ಕಾಯ್ದೆ (ಪೋಕ್ಸೋ) ಕುರಿತು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಹೆಣ್ಣು ಹೆತ್ತವರ ಕಷ್ಟ ಅವರ ತಂದೆ ತಾಯಂದಿರಿಗೆ ಗೊತ್ತೇ ವಿನಾ ಬೇರೆಯವರಿಗೆ ತಿಳಿಯದು. ಸಮಸ್ಯೆಗಳಿಂದ ಹೆಣ್ಣು ಮಕ್ಕಳನ್ನು ಸಂರಕ್ಷಿಸಬೇಕು. ಗಂಡು-ಹೆಣ್ಣು ಎನ್ನದೇ ಮಕ್ಕಳ ಮೇಲಿನ ದೌರ್ಜನ್ಯಗಳನ್ನು ನಿಯಂತ್ರಣಕ್ಕೆ ತರಬೇಕಿದೆ ಎಂದರು.
ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಿ ನೊಂದವರ ಮನೆಗೆ ವಿಚಾರಣೆಗೆ ಪೊಲೀಸರು ಸಾಮಾನ್ಯ ಧಿರಿಸಿನಲ್ಲೇ ತೆರಳಬೇಕು. ತ್ವರಿತವಾಗಿ ಸಾಕ್ಷಾೃಧಾರ ಸಂಗ್ರಹಿಸಬೇಕು. ದೂರು ಬಂದ ತಕ್ಷಣ ವ್ಯಾಪ್ತಿ ನೋಡದೆ ದಾಖಲಿಸಬೇಕು. ಕಾನೂನು ಪರಿಪಾಲನೆ ವೇಳೆ ಮಾನವೀಯತೆಗೆ ಹೆಚ್ಚಿನ ಒತ್ತು ಕೊಡಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಆರ್.ವಿನೋತ್‌ಪ್ರಿಯಾ ಮಾತನಾಡಿ, ಸಬಲೀಕರಣ, ಸಮಾನತೆಯತ್ತ ಮಹಿಳೆಯರು ಹೆಜ್ಜೆಯಿಡಬೇಕು. ಫೋಕ್ಸೋ ಪ್ರಕರಣಗಳಿಗೆ ಸಂಬಂಧಿಸಿದ ಕಡತಗಳಿಗೆ ಸಹಿ ಹಾಕುವ ವೇಳೆ ನನಗೆ ಆಗುವ ನೋವು ಅಷ್ಟಿಷ್ಟಲ್ಲ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಮಾತನಾಡಿ, ದೌರ್ಜನ್ಯಗಳಿಗೆ ಸಿಲುಕಿದವರು ಸಮಾಜಕ್ಕೆ ಹೆದರಿ ಕುಳಿತರೆ ಅಪರಾಧಿಗಳಿಗೆ ಕುಮ್ಮಕ್ಕು ಸಿಕ್ಕಂತಾಗುತ್ತದೆ. ಎಂದು ತಿಳಿಸಿದರು.
ಕಾನೂನು ಇಲಾಖೆ ವಿಶೇಷ ಕಾರ್ಯದರ್ಶಿ ಎಚ್.ಕೆ.ಜಗದೀಶ್ ಮಾತನಾಡಿ, ಕಾಯ್ದೆಯ ಪರಿಣಾಮಕಾರಿ ಜಾರಿಗೆ ಎಲ್ಲ ಜಿಲ್ಲೆಗಳಲ್ಲಿ ಕಾರ್ಯಾಗಾರ ಏರ್ಪಡಿಸಲಾಗುತ್ತಿದೆ. ಅಪರಾಧ ನಡೆದ ಮೇಲೆ ಜರುಗಿಸುವ ಕ್ರಮಗಳು ಒಂದೆಡೆ ಆದರೆ, ಅಪರಾಧವೇ ನಡೆಯದಂತೆ ನಿಯಂತ್ರಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.
ತನಿಖೆಯಿಂದ ತೀರ್ಪಿನವರೆಗೆ ಮಕ್ಕಳೊಂದಿಗೆ ಮಕ್ಕಳಾಗಿ ಅಧಿಕಾರಿಗಳು, ನ್ಯಾಯಾ ಧೀಶರು ವ್ಯವಹರಿಸಬೇಕು ಎಂದು ಹೇಳಿದರು.
ಮಹಿಳಾ ದಿನಾಚರಣೆ ಅಂಗವಾಗಿ ಡಿಸಿ, ಎಸ್ಪಿ ಮತ್ತಿತರರನ್ನು ಗಣ್ಯರು ಗೌರವಿಸಿದರು. ಪ್ರಧಾನ ಜಿಲ್ಲಾ ನ್ಯಾಯಾಧೀಶ ಎಸ್.ವೈ.ವಟವಟಿ ಅಧ್ಯಕ್ಷತೆ ವಹಿಸಿದ್ದರು.
ಪ್ರಾಂಶುಪಾಲೆ ಪ್ರೊ.ಎಂ.ಎಸ್.ಸುಧಾದೇವಿ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಡಿ.ಕೆ.ಶೀಲಾ, ವಕೀಲರಾದ ಟಿ.ನಾಗೇಂದ್ರಪ್ಪ, ಬಿ.ಕೆ.ಗಿರೀಶ್, ನಿವೃತ್ತ ನ್ಯಾಯಾಧೀಶ ಎಸ್.ಆರ್.ಸೋಮಶೇಖರ್ ಇದ್ದರು. ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ಸಂಶೋಧನಾ ಮುಖ್ಯಸ್ಥ ಡಾ.ರೇವಯ್ಯ ಒಡೆಯರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ, ಸರಸ್ವತಿ ಕಾನೂನು ಕಾಲೇಜು, ನ್ಯಾಯಾಂಗ, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ, ಪೊಲೀಸ್ ಮತ್ತು ಮಹಿಳಾ, ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ನೊಂದವರಿಗೆ ವ್ಯವಸ್ಥೆ: ಚಿತ್ರದುರ್ಗದಲ್ಲಿ ಪಿಡಿಜೆ ಆಗಿದ್ದಾಗ ನೊಂದ ಮಹಿಳೆಯ ಆರೋಗ್ಯ ಚಿಕಿತ್ಸೆಗೆ ನೆರವು ನೀಡುವ ಜತೆಗೆ ಆಕೆಯ ಇಬ್ಬರು ಹೆಣ್ಣು ಮಕ್ಕಳಿಗೆ ಬಿಸಿಎಂ ಹಾಸ್ಟೆಲ್ ವಸತಿ ಕೊಡಿಸಿ, ಓದಿಗೆ ವ್ಯವಸ್ಥೆ ಮಾಡಿಸಿದ್ದೆ ಎಂದು ವಸ್ತ್ರಮಠ ನೆನೆಪಿಸಿಕೊಂಡರು.
ಇಬ್ಬರೂ ಬಾಲಕಿಯರು ಇಂದು ಶೇ.100 ಅಂಕ ಪಡೆಯುತ್ತಿದ್ದಾರೆ. ನ್ಯಾಯಾಂಗ ಸಹಕಾರ ಸೊಸೈಟಿಯಿಂದ ಇಬ್ಬರಿಗೂ ತಲಾ 10 ಸಾವಿರ ರೂ. ಮಂಜೂರು ಮಾಡಲಾಗಿದೆ ಎಂದರು. ಇದೇ ವೇಳೆ ಬಾಲಕಿಯರಿಗೆ ಚೆಕ್ ವಿತರಿಸಲಾಯಿತು.