

ಚಿತ್ರದುರ್ಗ: ಹೊಳಲ್ಕೆರೆ ತಾಲೂಕು ಹೊರಕೇರಿದೇವರಪುರದ ಪುಣ್ಯಕ್ಷೇತ್ರದಲ್ಲಿ ಮಾ.9ರ ಸೋಮವಾರ ಮಧ್ಯಾಹ್ನ 3.30ರಿಂದ 4.30ರ ವರೆಗೆ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ ನಡೆಯಲಿದೆ.
ರಥೋತ್ಸವದ ವೈಭವ ಕಣ್ತುಂಬಿಕೊಳ್ಳಲು ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಬೆಂಗಳೂರು ಮಾತ್ರವಲ್ಲದೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸಲಿದ್ದಾರೆ.
ಐತಿಹಾಸಿಕ ಉತ್ಸವಕ್ಕೆ ಭರದಿಂದ ಸಿದ್ಧತೆಗಳು ಆರಂಭವಾಗಿವೆ. ವಿಶೇಷವಾಗಿ ತೇರು ಹಾಗೂ ದೇವಸ್ಥಾನವನ್ನು ಸಿಂಗರಿಸಲಾಗುತ್ತಿದೆ.
9ರಂದು ಬ್ರಹ್ಮರಥೋತ್ಸವ, ಪಾನಕ ಪೂಜಾ ವಸಂತೋತ್ಸವ, ಅನ್ನಸಂತರ್ಪಣೆ, ರಾತ್ರಿ ತೇರು ನೆರವೇರಲಿವೆ. ಮಾ.10ರ ಮಂಗಳವಾರ ಬೆಳಗ್ಗೆ ಭೂತ ಬಲಿಸೇವಾ ಕಾರ್ಯ, ಧೂಳೋತ್ಸವ ನಡೆಯಲಿವೆ.
ಮಾ.12ರ ಗುರುವಾರ ಬೆಳಗ್ಗೆ ಸೂರ್ಯ ಮಂಡಲೋತ್ಸವ, ಪೀಠೋತ್ಸವ, ರಾತ್ರಿ ಶಯನೋತ್ಸವ ನೆರವೇರಲಿವೆ.
ಮಾ.11ರ ಬುಧವಾರ ಧ್ವಜಾರೋಹಣ, ನವಿಲೋತ್ಸವಕ್ಕೆ ಸ್ವಾಮಿಯ ಆಗಮನ, ನವಿಲೋತ್ಸವ, ರಾತ್ರಿ ಹೂವಿನ ಪಲ್ಲಕ್ಕಿ ಉತ್ಸವವಿದೆ.
ಉತ್ಸವದ ಹಿನ್ನೆಲೆಯಲ್ಲಿ ಈಗಾಗಲೇ ವಿಶೇಷ ಪೂಜಾ ಕಾರ್ಯಗಳು ಆರಂಭವಾಗಿವೆ. ಮತಿಘಟ್ಟ, ತಾಳ್ಯ, ಕಸವನಹಳ್ಳಿ, ನೆಲ್ಲಿಕಟ್ಟೆ, ರಾಮೇನಹಳ್ಳಿ, ಚಿತ್ರದುರ್ಗ, ಗ್ಯಾರೇಹಳ್ಳಿ, ಭರಮಸಾಗರದ ಭಕ್ತರು ವಿವಿಧ ಸೇವಾ ಕಾರ್ಯ ನೆರವೇರಿಸುತ್ತಿದ್ದಾರೆ.
ಐತಿಹಾಸಿಕ ಹಿನ್ನೆಲೆ: 800 ವರ್ಷಗಳ ಇತಿಹಾಸವಿರುವ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ ನಂದರಾಜನ ಕಾಲದಲ್ಲಿ ನಿರ್ಮಾಣಗೊಂಡಿದೆ. ವೆಂಕಟೇಶ್ವರ ಸ್ವಾಮಿ ಪಟ್ಟಣದ ಹೊರವಲಯದಲ್ಲಿದ್ದ ಒಂದು ಹುತ್ತದಲ್ಲಿ ನೆಲೆಸಿದ್ದರಿಂದ ಹೊರಕೇರಿ ದೇವರಪುರ ಎಂಬ ಹೆಸರು ಬಂತು ಎಂಬ ಪ್ರತೀತಿ ಇದೆ. ವೆಂಕಟೇಶ್ವರ ಸ್ವಾಮಿ ಇಲ್ಲಿ ಲಕ್ಷ್ಮೀನರಸಿಂಹ ಸ್ವಾಮಿ ರೂಪದಲ್ಲಿ ಉದ್ಭವವಾಗಿದ್ದಾನೆ. ದುಷ್ಟ ನಂದರಾಜನನ್ನು ಸಂಹರಿಸಿದ ರಂಗನಾಥ ಮತ್ತು ಲಕ್ಷ್ಮೀ ನರಸಿಂಹಸ್ವಾಮಿಗೆ ಭಕ್ತರು ದೇವಸ್ಥಾನ ನಿರ್ಮಾಣ ಮಾಡಿ ಪೂಜೆ ಸಲ್ಲಿಸಿದರು ಎಂಬ ಪ್ರತೀತಿ ಇದೆ. ದೇವರು ಭಕ್ತರ ಕಷ್ಟಗಳನ್ನು ನಿವಾರಣೆ ಮಾಡುತ್ತಿದ್ದಾನೆ ಎಂಬುದು ಭಕ್ತರ ನಂಬಿಕೆ. ಪ್ರತಿ ವರ್ಷ ಮಾರ್ಚ್‌ನಲ್ಲಿ ಬ್ರಹ್ಮರಥೋತ್ಸವ ನಡೆಯುತ್ತದೆ.