

ಚಿತ್ರದುರ್ಗ: ಕರೊನಾದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ವಾದ್ಯಗೋಷ್ಠಿ ಕಲಾವಿದರಿಗೆ ಹೆಚ್ಚಿನ ನೆರವು ನೀಡಬೇಕೆಂದು ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ರಾಜ್ಯ ಸರ್ಕಾರವನ್ನು ಕೋರಿದರು.
ಜಿಲ್ಲಾ ಆರ್ಕೆಸ್ಟ್ರಾ ಸಾಂಸ್ಕ್ತ್ರತಿಕ ಕಲಾವಿದರ ಸಂಘ, ಅಖಿಲ ಕರ್ನಾಟಕ ವಾದ್ಯಗೋಷ್ಠಿ ಕಲಾವಿದರ ಮಹಾ ಸಂಘದಿಂದ ನಗರದ ತರಾಸು ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ, ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಗೂ ಸಂಗೀತ ದಿಗ್ಗಜ ರಾಜನ್ ಗೀತನಮನ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಮಾತನಾಡಿದರು.
ನಮ್ಮ ಮನಸ್ಸನ್ನು ಶಾಂತಗೊಳಿಸುವ ಸಂಗೀತಕ್ಕೆ ಏಕಾಗ್ರತೆಯತ್ತ ಕೊಂಡೊಯ್ಯುವ ಶಕ್ತಿ ಇದೆ. ಅಂತಹ ಸಂಗೀತ ಸೇವೆ ಯನ್ನು ನೀಡುವ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಎಲ್ಲರಿಂದ ಆಗಬೇಕಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಕಲಾವಿದರಿಗೆ ಕರೊನಾ ಸಂಕಷ್ಟ ಪರಿಹಾರವನ್ನು ರಾಜ್ಯ ಸರ್ಕಾರ ಒದಗಿದೆ. ಅದರಂತೆ ವಾದ್ಯಗೋಷ್ಠಿ ಕಲಾವಿದರಿಗೂ ನೆರವು ವಿಸ್ತರಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಕೋರುವುದಾಗಿ ಭರವಸೆ ನೀಡಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷೆ ಎನ್.ಸುಧಾ ಮಾತನಾಡಿದರು. ಅಖಿಲ ಕರ್ನಾಟಕ ವಾದ್ಯಗೋಷ್ಠಿ ಕಲಾವಿದರ ಮಹಾ ಸಂಘದ ಅಧ್ಯಕ್ಷ ಡಾ.ಆರ್.ಶಂಕರ್, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಸದಸ್ಯರಾದ ವೆಂಕಟೇಶ್, ಜೆ.ಶಶಿಧರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ. ತಾಜ್‌ಪೀರ್, ತಾಪಂ ಸದಸ್ಯೆ ಶಿಲ್ಪಾ ಹುಲುಗಪ್ಪ, ಅರುಣ್‌ಕುಮಾರ್, ಘನಶ್ಯಾಮ್, ಗುರು, ಎಂ.ಮಹೇಂದ್ರ, ಕರಿಯಪ್ಪ ಮತ್ತಿತರರು ಇದ್ದರು.