ಅನಿವಾಸಿ ಭಾರತೀಯರಿಗೆ ಬೇಕು ಕನ್ನಡ ಕಲಿಕೆ ಪ್ರಮಾಣ ಪತ್ರ

_Chitradurga Kannada Learning Non-Resident Indians Seminars
Published on

ವೆಬ್ ಸೆಮಿನಾರ್‌ನಲ್ಲಿ ಮನವಿ 7ನೇ ತರಗತಿಯವರೆಗೆ ಕನ್ನಡ ಕಡ್ಡಾಯಕ್ಕೆ ಒತ್ತಾಯ

ಚಿತ್ರದುರ್ಗ: ಕನ್ನಡ ಭಾಷೆ ಅನ್ನ ಕೊಡುವ ಭಾಷೆ ಆಗಬೇಕು ಎಂಬುದು ಬಹುದಿನದ ಬಹಳ ಜನರ ಒತ್ತಾರೆ. ಆದರೆ, ಭಾಷೆ ಎಂಬುದು ಸಂಸ್ಕೃತಿ, ಸಂವಹನ ಸಾಧನ, ಬದುಕು ಎಂಬುದು ಮತ್ತೆ ಕೆಲವರ ವಾದ.

ಈ ಮಧ್ಯೆ ಜಾಗತಿ ಬಸವ ಶಾಂತಿ ಸಂಸ್ಥೆ ಸಾಮಾಜಿಕ ಜಾಲತಾಣದಲ್ಲಿ ಈಚೆಗೆ ಆಯೋಜಿಸಿದ್ದ ಅನಿವಾಸಿ ಭಾರತೀಯರು/ಮಕ್ಕಳಿಗೆ ಕನ್ನಡ ಕಲಿಕೆ ಅನಿವಾರ್ಯತೆ ಮತ್ತು ಕನ್ನಡ ಕಲಿಕೆಯಿಂದ ಅನುಕೂಲತೆ, ಅನುಷ್ಟಾನತೆ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಗಳು, ಕನ್ನಡಾಭಿಮಾನಿಗಳು, ಮಠಾಧೀಶರು ತಮ್ಮದೇ ಆದ ಅಭಿಪ್ರಾಯ ಮಂಡಿಸಿದರು.

ಸಂಸ್ಥೆ ಅಧ್ಯಕ್ಷ ಶಶಿಧರ್ ಹೆಬ್ಬಾಳ ಮಾತನಾಡಿ, ಪ್ರಸ್ತುತ ಸಂದರ್ಭ ಕನ್ನಡ ಪ್ರಾಥಮಿಕ ಶಾಲೆಗಳನ್ನು ಉಳಿಸಿ, ಬೆಳೆಸುವ ಅನಿವಾರ್ಯತೆ ಎದುರಾಗಿದೆ. ಈ ನಿಟ್ಟಿನಲ್ಲಿ ಅನಿವಾಸಿ ಭಾರತೀಯರು ಹಾಗೂ ದೇಶದಲ್ಲಿರುವ ಎಲ್ಲರೂ ‘ನನ್ನ ಊರು ನನ್ನ ಶಾಲೆ’ ಎನ್ನುವ ಮಾದರಿಯಲ್ಲಿ ಅಭಿಯಾನಕ್ಕೆ ಕೈಜೋಡಿಸಬೇಕಿದೆ. ಈ ಮೂಲಕ ಕನ್ನಡ ಪ್ರಾಥಮಿಕ ಸರ್ಕಾರಿ ಶಾಲೆಗಳ ಉಳಿವಿಗೆ ಮುಂದಾಗಬೇಕು ಎಂದು ಮನವಿ ಮಾಡಿದರು.

ಭಾಷೆ ಎಂಬುದು ಒಂದು ಸಂಸ್ಕೃತಿ, ಬದುಕು ಆಗಿದೆ. ಭಾಷೆ ತನ್ನ ಶಕ್ತಿ ಕಳೆದುಕೊಂಡರೆ ಒಂದು ದೊಡ್ಡ ಸಂಸ್ಕೃತಿಯೇ ನಾಶಗೊಳ್ಳಲಿದೆ ಎಂಬ ಆತಂಕ ಆಳುವ ವರ್ಗ ಮತ್ತು ಇಂಗ್ಲೀಷ್ ವ್ಯಾಮೋಹಿಗಳಲ್ಲಿ ಇರಬೇಕು ಎಂದು ತಿಳಿಸಿದರು.

ಜತೆಗೆ ಭಾಷೆ ಕುರಿತು ಅಭಿಮಾನ, ಕಲಿಕಾಸಕ್ತಿ ಹೆಚ್ಚಿಸಲು ಮತ್ತು ಅನಿವಾರ್ಯ ವಾತಾವರಣ ಸೃಷ್ಟಿಸಲು 7ನೇ ತರಗತಿಯವರೆಗೆ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಕಡ್ಡಾಯಗೊಳಿಸಬೇಕು. ಜತೆಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ, ಮೊದಲ ಆದ್ಯತೆ ನೀಡುವ ಪದ್ಧತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಈ ನಿಟ್ಟಿನಲ್ಲಿ ಸರ್ಕಾರ ಗಟ್ಟಿ ನಿಲುವು ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಕತಾರ್ ದೇಶದಲ್ಲಿ ಕೇವಲ ಒಂದು ಶಾಲೆ ಹೊರತುಪಡಿಸಿ ಕನ್ನಡ ತೃತೀಯ ಭಾಷೆಯಾಗಿ ಇಲ್ಲ. ಅದಕ್ಕೆ ಕನ್ನಡ ಅಭ್ಯಾಸವನ್ನು ಪ್ರತ್ಯೇಕವಾಗಿ ಓದಿದವರಿಗೆ ಆನ್‌ಲೈನ್‌ನಲ್ಲಿ ಪರೀಕ್ಷೆ ಏರ್ಪಡಿಸಿ ಅಂಥವರಿಗೂ ಅಧಿಕೃತವಾಗಿ ಕನ್ನಡ ಕಲಿಕೆ ಪ್ರಮಾಣ ಪತ್ರ ಸರ್ಕಾರದಿಂದ ನೀಡುವ ಪದ್ಧತಿ ಜಾರಿಗೊಳಿಸಬೇಕು. ಇದರಿಂದ ಅವರ ಭವಿಷ್ಯಕ್ಕೆ ಅನುಕೂಲವಾಗಲಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಕ್ರಿಯಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಭರಣ, ಉತ್ತಮ ಸಲಹೆ ಇದಾಗಿದ್ದು, ಈ ಸಂಬಂಧ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಕವಿ ಎಸ್.ಜಿ.ಸಿದ್ದರಾಮಯ್ಯ, ಕಾರ್ಯದರ್ಶಿ ಡಾ .ಕೆ.ಮುರುಳೀಧರ ಕೂಡಲ ಸಂಗಮ ಮಠದ ಶ್ರೀ ಬಸವ ಜಯಮುತ್ಯುಂಜಯ ಸ್ವಾಮೀಜಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ.ನಾಡಗೌಡ, ಕೀಲಿಮಣೆ ಗುರುಪ್ರಸಾದ ಸಂವಾದದಲ್ಲಿ ಪಾಲ್ಗೊಂಡು ಕನ್ನಡ ಭಾಷೆ ಬೆಳೆವಣಿಗೆ ಕುರಿತು ಕೈಗೊಳ್ಳಬೇಕಾದ ನಿಲುವುದು ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net