ಶಿವತತ್ವ ಅತ್ಯಂತ ಪವಿತ್ರವಾದುದು

CTD 15 SHIVARATHRI (1)
Published on

ಚಿತ್ರದುರ್ಗ: ಶಿವತತ್ವ ಅತ್ಯಂತ ಪವಿತ್ರವಾಗಿದ್ದು, ಬಹುಬೇಗ ಒಲಿಯುವ ಏಕೈಕ ದೈವ ಮಹಾರುದ್ರ ಬೀದರ್‌ನ ಶ್ರೀ ಗಣಪತಿ ಮಹಾರಾಜ್ ಸ್ವಾಮೀಜಿ ಹೇಳಿದರು.

ಕಬೀರಾನಂದಾಶ್ರಮದಲ್ಲಿ ಶಿವನಾಮ ಸಪ್ತಾಹದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ 93ನೇ ವರ್ಷದ ಮಹಾಶಿವರಾತ್ರಿ ಮಹೋತ್ಸವದಲ್ಲಿ ಮಾತನಾಡಿದರು.

ಯಾರೂ ಅಂತರಂಗ ಪರಿಪೂರ್ಣ ಶುದ್ಧೀಕರಿಸಿಕೊಂಡು ದಯೆ, ದಾನ, ಧರ್ಮ ಮಾರ್ಗದಲ್ಲಿ ನಡೆಯುತ್ತಾರೋ ಅವರು ಪರಮಾತ್ಮನ ಕರುಣೆಗೆ ಪಾತ್ರರಾಗಿ, ಪರಮ ಭಕ್ತರಾಗಲಿದ್ದಾರೆ ಎಂದು ಹೇಳಿದರು.

ಶಿವನ ಮಹಿಮೆ ಬಹುದೊಡ್ಡದಿದೆ. ಶಿವರಾತ್ರಿ ವೇಳೆ ಪ್ರಸನ್ನನಾದ ಸ್ವಾಮಿಯನ್ನು ಶ್ರದ್ಧಾ-ಭಕ್ತಿಯಿಂದ ಪೂಜಿಸಿದಲ್ಲಿ ಇಷ್ಟಾರ್ಥ ಸಿದ್ಧಿಯಾಗಲಿದೆ. ಜ್ಯೋತಿರ್ಲಿಂಗದೊಳಗೆ ಪರಮಾತ್ಮ ಪ್ರಕಾಶಮಾನನಾದ ದಿನ ಇದಾಗಿದ್ದು, ವರ್ಷಕ್ಕೆ ಒಮ್ಮೆಯಾದರೂ ಶಿವನಾಮ ಸ್ಮರಣೆಯಲ್ಲಿ ಮಗ್ನರಾದಲ್ಲಿ ಜೀವನ ಪಾವನವಾಗಲಿದೆ ಎಂದು ಕಿವಿಮಾತು ಹೇಳಿದರು.

ಬದುಕಿನೊಳಗೆ ಸಾಧು, ಸಂತರ ಸತ್ಸಂಗದಿಂದ ಭಕ್ತರಿಗೆ ಸನ್ಮಾರ್ಗ ಪ್ರಾಪ್ತಿ ಜತೆ ಜೀವನದುದ್ದಕ್ಕೂ ಭಗವಂತನ ಕೃಪಾಶೀರ್ವಾದ ದೊರೆಯಲಿದೆ ಎಂದರು.

ಬಾದಾಮಿಯ ಶ್ರೀ ಕೈಲಾಸನಾಥ ಸ್ವಾಮೀಜಿ ಮಾತನಾಡಿ, ಭಕ್ತಿಗೆ ಬಿಟ್ಟರೆ ಭಗವಂತ ಯಾವುದಕ್ಕೂ ಒಲಿಯಲಾರ. ತಂದೆ-ತಾಯಿ ಆಸ್ತಿ ಅವಲಂಬಿಸಿ ಬದುಕಿದರೆ ಯಾವ ಪ್ರಯೋಜನವಿಲ್ಲ. ದುಡಿಮೆ ಮಾರ್ಗದಲ್ಲಿ ಸಾಗಿದಾಗ ಸಾರ್ಥಕತೆ ಸಿಗಲಿದೆ ಎಂದರು.

ಹಾಸನದ ಶ್ರೀ ಶಂಬುನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀ ಶಿವಲಿಂಗಾನಂದಾ ಸ್ವಾಮೀಜಿ, ಶ್ರೀ ಚಂದ್ರಶೇಖರ ಸ್ವಾಮೀಜಿ, ಶ್ರೀ ಶಿವಪುತ್ರ ಸ್ವಾಮೀಜಿ, ಶ್ರೀ ಗುರುನಾಥ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಉತ್ಸವ ಸಮಿತಿ ಅಧ್ಯಕ್ಷ ಜಿ.ಎಸ್.ಅನಿತ್ ಕುಮಾರ್, ಉಡುಪಿಯ ವಾಗ್ಮಿ ಚೈತ್ರಾ ಕುಂದಾಪುರ, ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ, ಉದ್ಯಮಿ ಬಿ.ಟಿ.ಸಿದ್ದೇಶ್ ಇತರರಿದ್ದರು.

ಸಂಸ್ಕೃತ ಶಿಕ್ಷಕ ಸುಬ್ರಾಯ್ ಭಟ್ ವೇದಘೋಷ ಮೊಳಗಿಸಿದರು. ಬೆಂಗಳೂರಿನ ವಿಜಯನಗರ ನಾರಾಯಣಧಾಮದ ಆದಿಚುಂಚನಗಿರಿ ಶಾಖಾಮಠದ ಸಾಯಿಕೀರ್ತಿನಾಥ್ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net