ಕಂತು ಕಟ್ಟಿಸ್ಕೊಂಡು ಕೈ ಕಟ್ಟಿ ಕುಳಿತ್ರೆ ಸರಿ ಇರದು

DC VINOD PRIYA (1)
Published on

ಚಿತ್ರದುರ್ಗ: ಮುಂಗಾರು ಹಂಗಾಮಿಗೆ ಕೆಲ ಮಾರ್ಪಾಡುಗಳೊಂದಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಜಾರಿಯಾಗಿದ್ದು ರೈತರನ್ನು ಕತ್ತಲಲ್ಲಿಡದೆ ನಿಖರ ಮಾಹಿತಿ ನೀಡಿ ಎಂದು ವಿಮಾ ಕಂಪನಿಗಳಿಗೆ ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ತಾಕೀತು ಮಾಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಕೃಷಿ ಇಲಾಖೆ, ವಿಮಾ ಕಂಪನಿ ಹಾಗೂ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ,ವಿಮೆ ಮೊತ್ತದ ಕುರಿತು ಕಂಪನಿಯವರು ರೈತರಿಗೆ ಸರಿಯಾದ ಮಾಹಿತಿ ನೀಡಬೇಕು ಎಂದರು.

ಕಂತು ಪಾವತಿ ಬಳಿಕ ನಿಷ್ಕ್ರಿಯವಾಗುವ ಕಂಪನಿಗಳು, ಕೃಷಿ ಇಲಾಖೆ, ಜಿಲ್ಲಾಡಳಿತ ಅಥವಾ ರೈತರಿಗೆ ಮಾಹಿತಿ ನೀಡುವುದಿಲ್ಲ. ಇದರಿಂದ ಯೋಜನೆ ಬಗ್ಗೆ ರೈತರಲ್ಲಿ ವಿಶ್ವಾಸ ಮೂಡುತ್ತಿಲ್ಲ ಎಂದು ಬೇಸರಿಸಿದರು.

ನಿಯಮಗಳ ಕುರಿತು ರೈತರನ್ನು ಕತ್ತಲಲ್ಲಿಡಬಾರದು. ಕಂತು ಕಟ್ಟಲು ಪ್ರಚಾರ ಮಾಡುತ್ತೀರಿ.ಬಳಿಕ ಹೊಣೆಗಾರಿಕೆಯಿಂದ ಜಾರಿಕೊಳ್ಳುತ್ತೀರಿ ಎಂದು ವಿಮಾ ಕಂಪನಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬೆಳೆ ಸಾಲ ಪಡೆದ ರೈತರಿಗೆ ವಿಮೆ ಕಡ್ಡಾಯ. ವಿಮೆ ಬೇಡ ಎಂದು ಬಯಸಿದರೆ ಬ್ಯಾಂಕ್‌ಗೆ ನಿಗದಿತ ಅವಧಿಯೊಳಗೆ ಮುಚ್ಚಳಿಕೆ ಬರೆದು ಕೊಡಬೇಕು. ಆನಂತರದಲ್ಲೂ ವಿಮೆ ಬಯಸಿದರೆ ಕಂತು ಪಾವತಿಸಿ ಯೋಜನೆ ಲಾಭ ಪಡೆಯಬಹುದು.ಬೆಳೆ ಸಾಲ ಪಡೆಯದ ರೈತರಿಗೆ ವಿಮೆ ಐಚ್ಛಿಕವಾಗಿದೆ ಎಂದರು.

ಜಂಟಿ ಕೃಷಿ ನಿರ್ದೇಶಕ ಡಾ.ವಿ.ಸದಾಶಿವ ಮಾತನಾಡಿ, ಕಳೆದ ಮುಂಗಾರು ಹಂಗಾಮಿಗೆ ಸಂಬಂಧಿಸಿ ಜಿಲ್ಲೆಯ 52214 ರೈತರಿಗೆ 73 ಕೋಟಿ ರೂ. ವಿಮಾ ಪರಿಹಾರ ಪಾವತಿಯಾಗಿದೆ. 1637 ರೈತರಿಗೆ 2.15 ಕೋಟಿ ರೂ. ಪಾವತಿ ಬಾಕಿ ಇದೆ. ಯೂನಿವರ್ಸಲ್ ಸೊಂಪೋ ಜನರಲ್ ಇನ್ಸೂರೆನ್ಸ್ ಕಂಪನಿ ಜಿಲ್ಲೆಯ ಏಜೆನ್ಸಿಯಾಗಿದೆ ಎಂದು ತಿಳಿಸಿದರು.

ಬೆಳೆ ಸಾಲದೊಂದಿಗೆ ವಿಮಾ ಕಂತನ್ನು ಹೆಚ್ಚುವರಿ ಸಾಲವನ್ನಾಗಿ ಮಂಜೂರು ಮಾಡುವಂತೆ ನಿಯಮ ರೂಪಿಸಲಾಗಿದೆ. ವಿಮೆ ಪ್ರಸ್ತಾವನೆ ಹಾಗೂ ಕಂತನ್ನು ನಿಗದಿತ ಸಮಯದೊಳಗೆ ವಿಮಾ ಸಂಸ್ಥೆಗೆ ವರ್ಗಾಯಿಸದಿದ್ದರೆ ವ್ಯಾಜ್ಯಗಳಿಗೆ ಆ ಸಂಸ್ಥೆಗಳೇ ನೇರ ಹೊಣೆಯಾ ಗುತ್ತವೆ ಎಂದು ಹೇಳಿದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕ ನಿಂಗೇಗೌಡ, ಡಿಸಿಸಿ ಬ್ಯಾಂಕ್ ಎಂಡಿ ಎಂ.ಇಲ್ಯಾಸ್ ಉಲ್ಲಾ ಷರೀಫ್, ಯೂನಿವರ್ಸಲ್ ಸೊಂಪೋ ಜನರಲ್ ಇನ್ಸೂರೆನ್ಸ್ ಕಂಪನಿ ಪ್ರತಿನಿಧಿ ಮಾರೇಶ್ ಮತ್ತಿತರರು ಇದ್ದರು.

ಆಗಸ್ಟ್ 14 : ಮಳೆಯಾಶ್ರಿತ ನವಣೆ, ರಾಗಿ, ನೀರಾವರಿ ಭತ್ತ, ರಾಗಿ.

ಜುಲೈ 31: ಮಳೆಯಾಶ್ರಿತ ಹತ್ತಿ, ಶೇಂಗಾ, ಹುರುಳಿ, ಮೆಕ್ಕೆಜೋಳ, ಈರುಳ್ಳಿ, ಸಜ್ಜೆ, ತೊಗರಿ, ಕೆಂಪು ಮೆಣಸಿನಕಾಯಿ, ಸಾವೆ, ಎಳ್ಳು, ಜೋಳ, ಸೂರ್ಯಕಾಂತಿ, ಟೊಮ್ಯಾಟೊ. ನೀರಾವರಿ ಹತ್ತಿ, ಶೇಂಗಾ, ಮೆಕ್ಕೆಜೋಳ, ಜೋಳ, ಸೂರ್ಯಕಾಂತಿ.

ಜುಲೈ 15 :ಮಳೆಯಾಶ್ರಿತ ಹೆಸರು, ನೀರಾವರಿ ಈರುಳ್ಳಿ.

ವಿವಿಧ ಬೆಳೆಗಳ ವಿಮೆ ನೋಂದಣಿಗೆ ನಿಗದಿಪಡಿಸಲಾದ ಕೊನೆ ದಿನಗಳ ವಿವರ

ಮಳೆಯಾಶ್ರಿತ ಬೆಳೆ ನಿಗದಿ
ಮಳೆಯಾಶ್ರಿತ ಕೆಲವು ಬೆಳೆಗಳನ್ನು ತಾಲೂಕು ಮಟ್ಟದಲ್ಲಿ ಮುಖ್ಯ ಬೆಳೆಯಾಗಿ ನಿಗದಿಪಡಿಸಲಾಗಿದೆ. ಚಳ್ಳಕೆರೆ-ಶೇಂಗಾ, ಚಿತ್ರದುರ್ಗ -ಮುಸುಕಿನ ಜೋಳ, ಹಿರಿಯೂರು-ಶೇಂಗಾ, ಸೂರ್ಯಕಾಂತಿ. ಹೊಳಲ್ಕೆರೆ-ಮುಸುಕಿನ ಜೋಳ, ರಾಗಿ. ಮೊಳಕಾಲ್ಮೂರು-ಶೇಂಗಾ, ಹೊಸದುರ್ಗ-ರಾಗಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net