

ಚಿತ್ರದುರ್ಗ: ವಿಶ್ವದ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಎಣ್ಣೆಕಾಳು ಬೆಳೆಗಳ ಇಳುವರಿ ಕಡಿಮೆ ಇದೆ. ಹೀಗಾಗಿ ಅದರ ಪ್ರಮಾಣ ಗಣನೀಯವಾಗಿ ಹೆಚ್ಚಿಸುವ ಸಂಬಂಧ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಭಾರತೀಯ ತೈಲ ಬೀಜಗಳು ಮತ್ತು ಉತ್ಪಾದನೆ ರಫ್ತು ಪ್ರಚಾರ ಮಂಡಳಿ ಅಧ್ಯಕ್ಷ ನಿಲೇಶ್ ವೀರ ತಿಳಿಸಿದರು.
ಖಾಸಗಿ ಹೋಟೆಲ್‌ನಲ್ಲಿ ಮಂಡಳಿಯಿಂದ ಭಾನುವಾರ ಆಯೋಜಿಸಿದ್ದ ರೈತರ ಮೇಳ ಹಾಗೂ ಸಾಮರ್ಥ್ಯ ನಿರ್ಮಾಣದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಸದ್ಯ 12ರಿಂದ 14 ಮಿಲಿಯನ್ ಟನ್‌ನಷ್ಟು ಗುಣಮಟ್ಟದ ಖಾದ್ಯ ತೈಲ ಉತ್ಪಾದನೆ ಆಗುತ್ತಿದೆ. ಇನ್ನಷ್ಟು ಇಳುವರಿ ಹೆಚ್ಚಿಸಿ ವಿದೇಶಗಳಿಂದ ಆಮದು ಮಾಡಿಕೊಳ್ಳುವುದನ್ನು ನಿಯಂತ್ರಿಸುವುದೇ ಮಂಡಳಿಯ ಮುಖ್ಯ ಗುರಿಯಾಗಿದೆ ಎಂದರು.
ಹಿರಿಯೂರು ಬಬ್ಬೂರಿನ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಶೇಂಗಾ ತಳಿ ವಿಜ್ಞಾನಿ ಡಾ.ಬಿ.ಎನ್.ಹರೀಶ್‌ಬಾಬು ಮಾತನಾಡಿ, ಕದಿರಿ ಲೇಪಾಕ್ಷಿ ಹಾಗೂ ಡಿಎಚ್ 256 ಶೇಂಗಾ ಅಪರೂಪದ ತಳಿಗಳಾಗಿದ್ದು, ಅಧಿಕ ಇಳುವರಿ ಮತ್ತು ಎಣ್ಣೆ ಅಂಶ, ರೋಗ ಹಾಗೂ ಬರ ನಿರೋಧಕ ಶಕ್ತಿ ಹೊಂದಿವೆ. ಇವುಗಳ ಕುರಿತು ಅಪಪ್ರಚಾರ ಮಾಡಿ ರೈತರನ್ನು ದಿಕ್ಕುತಪ್ಪಿಸಬೇಡಿ ಎಂದು ಸಲಹೆ ನೀಡಿದರು.
ಕೇಂದ್ರದ ಹಿರಿಯ ಕ್ಷೇತ್ರ ಸಹಾಯಕ ಹನುಮಂತ ನಾಯಕ್ ಮಾತನಾಡಿ, ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಬೇಕು ಎಂಬ ಕಾರಣಕ್ಕೆ ಅಧಿಕ ರಾಸಾಯನಿಕ ಬಳಸಿ ಮಣ್ಣಿನ ಗುಣ, ಸತ್ವ ಹಾಳು ಮಾಡಬೇಡಿ. ಅಧಿಕಾರಿಗಳು ಹಾಗೂ ತಜ್ಞರು ಶಿಫಾರಸ್ಸು ಮಾಡಿದ ಪ್ರಮಾಣದಷ್ಟು ಮಾತ್ರ ಬಳಸಿ ಎಂದರು.
ಶೇಂಗಾ ಸೇರಿ ಎಣ್ಣೆಕಾಳು, ತೈಲೋತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದಾಗ ಮಾತ್ರ ಬೆಳೆಗಾರರು ಉಳಿಯಲು ಸಾಧ್ಯ ಎಂದು ರೈತರಾದ ಜಿ.ತಿಪ್ಪೇಸ್ವಾಮಿ, ಯರ‌್ರಿಸ್ವಾಮಿ, ಟಿ.ತಿಪ್ಪೇಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ವಾಣಿಜ್ಯ ಮಂಡಳಿ ಜಿಲ್ಲಾಧ್ಯಕ್ಷ ಎನ್.ಸತೀಶ್ ಹಾಗೂ ರೈತರು, ವರ್ತಕರು ಪಾಲ್ಗೊಂಡಿದ್ದರು.
ಎಣ್ಣೆಕಾಳು ಬೆಳೆಗಳಿಗೆ ಹೆಚ್ಚು ಬೇಡಿಕೆ ಇದ್ದು, ಸಬ್ಸಿಡಿ ದರದಲ್ಲಿ ಶೇಂಗಾ ಮತ್ತು ಅಗತ್ಯ ಜಿಪ್ಸಂ ವಿತರಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಜತೆ ಮಂಡಳಿ ಕೈಜೋಡಿಸಬೇಕು. ಇಂತಹ ಕಾರ್ಯಕ್ರಮ ಹೋಬಳಿ, ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ದೊಡ್ಡಮಟ್ಟದಲ್ಲಿ ಆಯೋಜಿಸಿ ರೈತರಿಗೆ ಅರಿವು ಮೂಡಿಸಬೇಕು. ಆರ್.ರಜನಿಕಾಂತ್ ಸ.ನಿರ್ದೇಶಕ, ಕೃಷಿ ಇಲಾಖೆ, ಚಿತ್ರದುರ್ಗ