ಹೆಗಡೆ ವಿರುದ್ಧ ಕೈ ಪಡೆ ಆಕ್ರೋಶ

CTD 8 STRIKE
Published on

ಚಿತ್ರದುರ್ಗ: ಸತ್ಯ, ಅಹಿಂಸೆ ಮೂಲಕ ದೇಶಕ್ಕೆ ಸ್ವಾತಂತ್ರೃವನ್ನು ತಂದುಕೊಟ್ಟ ಮಹಾತ್ಮಗಾಂಧಿ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆಪಾದಿಸಿ, ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ನಗರದ ಒನಕೆ ಓಬವ್ವ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಗಾಂಧಿ ಸೇರಿ ಸತ್ಯದ ಹಾದಿಯಲ್ಲಿ ಸಾಗಿ ದೇಶಕ್ಕೆ ಸ್ವತಂತ್ರ ತಂದುಕೊಟ್ಟವರ ಬಗ್ಗೆ ಬಿಜೆಪಿಗೆ ಅಭಿಮಾನವಿದ್ದಿದ್ದರೆ ಹೆಗಡೆಯನ್ನು ಉಚ್ಛಾಟಿಸಬೇಕಿತ್ತು. ಈಗಲೂ ಕಾಲ ಮಿಂಚಿಲ್ಲ ಎಂದು ತಿಳಿಸಿದರು.

ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್ ಮಾತನಾಡಿ, ನಾಲಿಗೆ ಮೇಲೆ ಹಿಡಿತವಿಲ್ಲದ ಕಾರವಾರದ ಸಂಸದ ಅನಂತಕುಮಾರ ಹೆಗಡೆ ದೇಶಕ್ಕೆ ಅಪಮಾನ ಮಾಡಿದ್ದಾರೆ. ಕೂಡಲೇ ಅವರು ಜನರಲ್ಲಿ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

ಕೂಡಾ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್ ಮಾತನಾಡಿ, ಗಾಂಧಿ ವಿರುದ್ಧ ಹಗುರವಾಗಿ ಮಾತನಾಡಿರುವ ಅನಂತಕುಮಾರ ಹೆಗಡೆ ಅವರನ್ನು ಬಿಜೆಪಿಯಿಂದ ಉಚ್ಛಾಟಿಸಬೇಕು. ಜತೆಗೆ ಹೆಗಡೆ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ತಕ್ಷಣ ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಿ.ಶಿವುಯಾದವ್, ಜಿಪಂ ಸದಸ್ಯ ಎಮ್ಮೆಹಟ್ಟಿ ಕೃಷ್ಣಮೂರ್ತಿ, ಮುಖಂಡರಾದ ಡಿ.ಎನ್.ಮೈಲಾರಪ್ಪ, ಪೈಲ್ವಾನ್ ತಿಪ್ಪೇಸ್ವಾಮಿ, ಬೀಸ್ನಹಳ್ಳಿ ಜಯಪ್ಪ, ಸೈಯದ್ ಅಲ್ಲಾಭಕ್ಷಿ, ಆರ್.ಪ್ರಕಾಶ್, ಕೆ.ಅನ್ವರ್‌ಪಾಷ, ರಾಜಪ್ಪ, ಅಬ್ದುಲ್ಲಾ, ಸಾಧಿಕ್‌ವುಲ್ಲಾ, ಎನ್.ಡಿ.ಕುಮಾರ್, ಮೀನಾಕ್ಷಿ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net