ಆಸ್ಪತ್ರೆಯಿಂದ ನಾಲ್ವರು ತಬ್ಲಿಘಿ ಸದಸ್ಯರ ಬಿಡುಗಡೆ

CTD 23 gunamuka (1)
Published on

ಚಿತ್ರದುರ್ಗ: ಕರೊನಾ ಸೋಂಕಿತ ತಬ್ಲಿಘಿ ಜಮಾತ್‌ನ ಆರು ಸದಸ್ಯರ ಪೈಕಿ ಗುಣಮುಖರಾದ ನಾಲ್ವರನ್ನು (ಪಿ.751, 752, 787, 788) ನಗರದ ಕೋವಿಡ್-19 ಆಸ್ಪತ್ರೆಯಿಂದ ಶನಿವಾರ ಬಿಡುಗಡೆ ಮಾಡಲಾಯಿತು.

ಮೇ 8 ಹಾಗೂ 9 ರಂದು ತಲಾ ಮೂವರಂತೆ ಒಟ್ಟು ಆರು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಇನ್ನಿಬ್ಬರ ವರದಿ ಬರಬೇಕಿದೆ.

ಈ ವೇಳೆ ಜಿಲ್ಲಾಧಿಕಾರಿ ಆರ್.ವಿನೋತ್‌ಪ್ರಿಯಾ ಮಾತನಾಡಿ, ನೀವೀಗ ಗುಣಮುಖರಾಗಿದ್ದೀರಿ. ಅಂಜಿಕೆ ಬೇಡ, ಆದರೆ 14 ದಿನ ಮನೆಯಲ್ಲಿ ಇರಬೇಕು. ಏನಾದರೂ ತೊಂದರೆಯಾದರೆ ಆರೋಗ್ಯ ಇಲಾಖೆಗೆ ಮಾಹಿತಿ ಕೊಡುವಂತೆ ತಿಳಿಸಿದರು.

ಗುಣಮುಖರಾದವರಿಗೆ ಪುಷ್ಪಗುಚ್ಛ ನೀಡಿ ಬೀಳ್ಕೊಡಲಾಯಿತು. ಇದೇ ವೇಳೆ ಪ್ರಮಾಣ ಪತ್ರ ವಿತರಿಸಿ ಹೋಂ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಯಿತು.

ಜಿಲ್ಲಾಸ್ಪತ್ರೆಯ ಡಿಎಸ್ ಡಾ.ಎಚ್.ಕೆ.ಬಸವರಾಜಪ್ಪ, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ತುಳಸಿರಂಗನಾಥ್, ಕೋವಿಡ್ ಆಸ್ಪತ್ರೆ ನೋಡಲ್ ಅಧಿಕಾರಿ ಡಾ.ಪ್ರಕಾಶ್,ಡಾ.ದೇವರಾಜ್, ಆರ್‌ಎಂಒ ಡಾ.ಆನಂದ ಪ್ರಕಾಶ್,ಆರೋಗ್ಯ ಶಿಕ್ಷಣಾಧಿಕಾರಿ ಮಂಜುನಾಥ್,ಆರೋಗ್ಯ ನಿರೀಕ್ಷಕ ರಂಗಾರೆಡ್ಡಿ ಇದ್ದರು.

ಸಾಂಸ್ಥಿಕ ಕ್ವಾರಂಟೈನಲ್ಲಿದ್ದ 9 ತಬ್ಲಿಘಿ ಜಮಾತ್ ಸದಸ್ಯರನ್ನು ಮನೆಗೆ ಕಳಿಸಲಾಗಿದೆ. ಹೊರ ರಾಜ್ಯ, ದೇಶಗಳಿಂದ ಬಂದವರ ಸಾಂಸ್ಥಿಕ ಕ್ವಾರಂಟೈನ್ ಅವಧಿಯನ್ನು 7 ದಿನಗಳಿಗೆ ಇಳಿಸಲಾಗಿದೆ. ಮೊದಲ ದಿನ ಹಾಗೂ 7ನೇ ದಿನ ಗಂಟಲು ದ್ರವದ ಪರೀಕ್ಷೆ ವರದಿ ಆಧರಿಸಿ ಅವರನ್ನು ಮನೆಗೆ ಕಳಿಸಲು ಸರ್ಕಾರ ಸೂಚಿಸಿದೆ ಎಂದು ಜಿಲ್ಲಾ ಸರ್ವೆ ಕ್ಷಣಾಧಿಕಾರಿ ಡಾ.ತುಳಸಿರಂಗನಾಥ್ ತಿಳಿಸಿದರು.

ಕೋಡಿಹಳ್ಳಿ ಕುಟುಂಬ ಸುರಕ್ಷಿತ: ಚಳ್ಳಕೆರೆ ತಾಲೂಕು ಕೋಡಿಹಳ್ಳಿಯ ಸೋಂಕಿತ ತಂದೆ, ಮಗಳು ಗುಣಮುಖರಾಗುತ್ತಿದ್ದಾರೆ. ಮುನ್ನೆಚ್ಚರಿಕೆಯಾಗಿ ಚಿಕಿತ್ಸೆ ಪಡೆಯುತ್ತಿರುವ ಅದೇ ಕುಟುಂಬದ ಒಂದು ತಿಂಗಳ ಶಿಶು ಹಾಗೂ ತಾಯಿ ಕೂಡ ಸುರಕ್ಷಿತವಾಗಿದ್ದಾರೆ.

ವಾರಿಯರ್ಸ್ ಸೇವೆ ಶ್ಲಾಘನೆ: ಗುಣಮುಖರ ಪೈಕಿ ಇಬ್ಬರು ಮಾತನಾಡಿ,ವೈದ್ಯರು ಹಾಗೂ ವೈದ್ಯ ಸಿಬ್ಬಂದಿಯ ಕರ್ತವ್ಯ ಪ್ರಜ್ಞೆ ಶ್ಲಾಘಿಸಿದರು. ಇದೇ ವೇಳೆ ವೈದ್ಯರು ಹಾಗೂ ಸಿಬ್ಬಂದಿ ಮೇಲೆ ಇದೇ ವೇಳೆ ಜಿಲ್ಲಾಧಿಕಾರಿ, ಹೂವು ಎರಚಿ ಅವರ ಸೇವೆ ಪ್ರಶಂಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net