ಹುತಾತ್ಮ ಯೋಧರಿಗೆ ಕೋಟೆನಾಡು ಚಿತ್ರದುರ್ಗದಲ್ಲಿ 28 ಕ್ಕೆ ವೀಣಾವಾದನದ ನಮನ

WEB PHOTO
Published on

ಹರ್ಷ ನ. ಪುರೋಹಿತ ಚಿತ್ರದುರ್ಗ
ಕೋಟೆ ನಾಡು ಚಿತ್ರದುರ್ಗ ಮತ್ತೊಂದು ಇತಿಹಾಸ ರಚಿಸಲು ಸಜ್ಜಾಗುತ್ತಿದೆ. ಮೇ 28 ರಂದು 160 ಕಲಾವಿದರು ಒಂದೇ ವೇದಿಕೆಯಲ್ಲಿ ವೀಣಾವಾದನದ ರಸದೌತಣ ಉಣಬಡಿಸಲಿದ್ದಾರೆ. ಇದಕ್ಕೆ ವಿಶ್ವಹಿಂದು ಪರಿಷತ್ ವೀರ ಮದಕರಿ ಸೇವಾ ಟ್ರಸ್ಟ್ ಆಯೋಜಿಸಿರುವ ಹುತಾತ್ಮ ಯೋಧರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ವೇದಿಕೆಯಾಗಲಿದೆ.

ಭಾರತದ ಸಂಗೀತವಾದ್ಯಗಳಲ್ಲಿ ಅಗ್ರ ಸ್ಥಾನ ಪಡೆದ ವೀಣೆಗೆ ರಾಷ್ಟ್ರೀಯ ವಾದ್ಯದ ಹಿರಿಮೆ ಇದೆ. ಒಂದು ಕೃತಿಯನ್ನು ಶ್ರುತಿ, ಲಯ ಮತ್ತು ಸಾಹಿತ್ಯದ ಮೂಲಕ ಸ್ಪಷ್ಟವಾಗಿ ನಾದದಲ್ಲಿ ಹೊಮ್ಮಿಸುವುದು ವೀಣೆಯ ವೈಶಿಷ್ಟ್ಯ. ಸಾಂಪ್ರದಾಯಿಕ ಮತ್ತು ಸಮಕಾಲೀನ ಆಧುನಿಕ ಶೈಲಿಗೂ ಒಗ್ಗಿದ ವಾದ್ಯವಿದು. ಸೋಲೊ ಕಛೇರಿಯಲ್ಲಿ ವೀಣೆಯನ್ನು ನುಡಿಸಬಹುದು. ಅದರಂತೆ ಐದು ಜನ ಕಲಾವಿದರು ಒಟ್ಟಾಗಿ ನುಡಿಸುವ ಪಂಚವೀಣಾವಾದನ ಜನಪ್ರಿಯವಾಗುತ್ತಿದೆ. 100ಕ್ಕೂ ಹೆಚ್ಚು ಕಲಾವಿದರು ಒಂದೆಡೆ ಸೇರುವುದು ಅಪೂರ್ವ ಸಂಗಮವಾಗಲಿದೆ.

ಬೆಂಗಳೂರಿನ ನಂತರ ಇಷ್ಟು ಸಂಖ್ಯೆಯ ಕಲಾವಿದರು ಒಂದೇ ವೇದಿಕೆಯಲ್ಲಿ ಪ್ರದರ್ಶನ ನೀಡುವುದು ಇದೇ ಮೊದಲು. ಬೆಂಗಳೂರಿನ ವಲ್ಲಕಿ ಗಾನ ನಿಲಯದ ವೀಣಾವಾದಕಿ ಜ್ಯೋತಿ ಚೇತನ ನೇತೃತ್ವದಲ್ಲಿ ಶಿವಮೊಗ್ಗ, ಉಡುಪಿ, ದಾವಣಗೆರೆ, ಬೆಂಗಳೂರು, ಭದ್ರಾವತಿ, ಚಿತ್ರದುರ್ಗದ ಕಲಾವಿದರು 2 ಗಂಟೆಗಳ ಕಾಲ ಏಕಕಾಲದಲ್ಲಿ ತಂತಿ ಮೀಟಲಿದ್ದಾರೆ.

ಶಾಸ್ತ್ರೀಯ, ಲಘು ಸಂಗೀತ, ದೇಶಭಕ್ತಿ, ಗೋವಿನ ಹಾಡು, ಸರಸ್ವತಿ ಭಜನೆ, ರಾಜ್ಯಭಕ್ತಿಗೀತೆಗಳು ವೀಣೆಯ ಮಧುರ ನಾದದಲ್ಲಿ ಮೂಡಿ ಬರಲಿವೆ.


ಪುಣ್ಯಕೋಟಿ ಉಳಿಸಿ, ಕೋಟಿ ಪುಣ್ಯ ಗಳಿಸಿ

ರಾಷ್ಟ್ರೀಯ, ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ಪ್ರೇರಣೆ ನೀಡಲು ಮೇ 28 ರಂದು ಹಳೆಯ ಮಾಧ್ಯಮಿಕ ಶಾಲೆ ಆವರಣದಲ್ಲಿ ಸಂಜೆ 5.30 ಕ್ಕೆ ಹುತಾತ್ಮ ಯೋಧರಿಗೆ ಗೌರವ ಸಮರ್ಪಣೆ ಮಾಡಲಾಗುವುದು. ಪುಣ್ಯಕೋಟಿ ಉಳಿಸಿ, ಕೋಟಿ ಪುಣ್ಯ ಗಳಿಸಿ ಘೋಷವಾಕ್ಯದೊಂದಿಗೆ ಚಿತ್ರದುರ್ಗ, ಯಾದಗಿರಿ ಸೇರಿ ಮೂರು ಗೋಶಾಲೆಗಳಿಗೆ ಗೌರವಧನ ಸಮರ್ಪಣೆ ಹಮ್ಮಿಕೊಳ್ಳಲಾಗಿದೆ. ವೀಣೆಯ ಮಹತ್ವ ಸಾರಲು ಹಾಗೂ ಈ ವಾದ್ಯದ ಬಗ್ಗೆ ಆಸಕ್ತಿ ಮೂಡಿಸಲು ಸಹ ಇದು ವೇದಿಕೆಯಾಗುತ್ತಿದೆ.

ದೇಸೀ ಗೋತಳಿಗಳ ಬಗ್ಗೆ ಅರಿವು ಮೂಡಿಸಲು ಹಾಗೂ ಸಾಕಣೆ ಉತ್ತೇಜಿಸಲು ಅಂದು ಬೆಳಗ್ಗೆ ಗೋವುಗಳ ಪ್ರದರ್ಶನ ಹಾಗೂ ಸ್ಪರ್ಧೆಯನ್ನು ಸಹ ಆಯೋಜಿಸಲಾಗಿದೆ.

ಹುತಾತ್ಮರಾದ ಹಾಸನದ ಸಂದೀಪ್ ಶೆಟ್ಟಿ, ಮದ್ದೂರು ತಾಲೂಕು ಗುಡಿಗೆರೆಯ ಎಚ್.ಗುರು, ಎಚ್.ಡಿ. ಕೋಟೆ ತಾಲೂಕು ಮಗ್ಗಿಯ ಎನ್. ಸುಂದರ್, ಕೆ.ಆರ್. ನಗರದ ಅವಿನಾಶ್, ಹಾಸನದ ಫಣಿರಾಜ್ ಎಚ್.ಡಿ, ಹಿರಿಯೂರು ತಾಲೂಕು ಪರಮೇನಹಳ್ಳಿ ಮಲ್ಲಿಕಾರ್ಜುನ ಕುಟುಂಬದವರಿಗೆ ಹಾಗೂ ಕುಮಟಾದ ವಿನಾಯಕ ಪಟಗಾರ್, ಬೆಂಗಳೂರಿನ ಎಚ್.ಎನ್. ಮಹೇಶ್ ಅವರಿಗೆ ಗೌರವ ಸಮರ್ಪಣೆ ನಡೆಯಲಿದೆ.

ಯುವ ಬ್ರಿಗೇಡ್‌ನ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ. ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ. ಬದರಿನಾಥ್, ಬಜರಂಗದಳ ಶಿವಮೊಗ್ಗ ವಿಭಾಗ ಸಂಚಾಲಕ ಪ್ರಭಂಜನ ಸಾರಥ್ಯ ವಹಿಸಿದ್ದಾರೆ.


ಟ್ರಸ್ಟ್ ಕುರಿತು ಒಂದಷ್ಟು …

ಚಿತ್ರದುರ್ಗದ ವಿಶ್ವ ಹಿಂದು ಪರಿಷತ್ ವೀರಮದಕರಿ ಸೇವಾ ಟ್ರಸ್ಟ್ ಕಳೆದ ಕೆಲವು ವರ್ಷಗಳಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಸಮಾಜದಲ್ಲಿನ ಅಸ್ಪಶ್ಯತೆ ನಿವಾರಿಸಿ ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಯುವಕರನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢಗೊಳಿಸಲು ಯೋಗ, ವ್ಯಾಯಾಮ, ಕರಾಟೆ, ತರಬೇತಿ ಶಿಬಿರ ಆಯೋಜಿಸುತ್ತ ಬಂದಿದೆ. ಪರಿಸರ ಸಂರಕ್ಷಣೆ ದೃಷ್ಟಿಯಿಂದ ಗಿಡ ನೆಡುವ ಕಾರ್ಯಕ್ರಮ, ಪ್ಲಾಸ್ಟಿಕ್‌ಮುಕ್ತ ಸಮಾಜಕ್ಕೆ ಪ್ರೇರಣೆ ನೀಡಲು ಬಟ್ಟೆ ಚೀಲ ವಿತರಣೆ ಹಾಗೂ ಉಚಿತ ವೈದ್ಯಕೀಯ ತಪಾಸಣಾ ಶಿಬಿರಗಳನ್ನು ಆಯೋಜಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net