

ಚಿತ್ರದುರ್ಗ: ರಾಜ್ಯದ ಹಿಂದು ಮುಖಂಡರ ಹತ್ಯೆ ಸಂಚು ಬಯಲಾದ ಹಿನ್ನೆಲೆಯಲ್ಲಿ ಪಿಎಫ್‌ಐ, ಎಸ್‌ಡಿಪಿಐ ಹಾಗೂ ಕೆಎಫ್‌ಡಿ ಸಂಘಟನೆಗಳನ್ನು ನಿಷೇಧಿಸುವಂತೆ ಬಜರಂಗಳ ದಳ ಹಾಗೂ ಸಂಘ ಪರಿವಾರದ ಕಾರ‌್ಯಕರ್ತರು ಮಂಗಳವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ರಾಜ್ಯದ ಹಲವೆಡೆ ಹಿಂಸಾಚಾರ ಪ್ರಚೋದಿಸುತ್ತಿವೆ. ಈಗಾಗಲೇ ಹಲವು ಮುಖಂಡರ ಹತ್ಯೆಗೆ ಕಾರಣವಾಗಿವೆ. ರಾಜ್ಯ, ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಮತ್ತು ಯಾವುದೇ ಅನಾಹುತಕ್ಕೆ ಅವಕಾಶವಾಗದಂತೆ ಕಟ್ಟೆಚ್ಚರ ವಹಿಸಲು ಈ ಸಂಘಟನೆಗಳನ್ನು ನಿಷೇಧಿಸ ಬೇಕೆಂದು ಆಗ್ರಹಿಸಿ ಎಡಿಸಿ ಸಿ.ಸಂಗಪ್ಪಗೆ ಮನವಿ ಸಲ್ಲಿಸಿದರು.
ಬಜರಂಗಳದ ವಿಭಾಗ ಸಂಚಾಲಕ ಪ್ರಭಂಜನ್, ವಿಶ್ವ ಹಿಂದು ಪರಿಷತ್ ಜಿಲ್ಲಾ ಗೋರಕ್ಷಾ ಪ್ರಮುಖ ಪಿ.ರುದ್ರೇಶ್, ನಗರ ಅಧ್ಯಕ್ಷ ಎಸ್.ಶ್ರೀನಿವಾಸ್, ಗ್ರಾಮಾಂತರ ಅಧ್ಯಕ್ಷ ಶಶಿ, ಪರಿವಾರ ಪ್ರಮುಖ ಕಾರ‌್ಯಕರ್ತರಾದ ವಿಠ್ಠಲ್, ಬಿ.ವೆಂಕಟೇಶರೆಡ್ಡಿ, ಸಂಜಯ್ ಜಾಲಿಕಟ್ಟೆ, ಮಲ್ಲೇಶ್ ಹಾಗೂ ಕಿರಣ್ ಇದ್ದರು.