ಸುರಕ್ಷತಾ ಕ್ರಮ ಕೈಗೊಳ್ಳದಿದ್ರೆ ಕ್ರಮ

DC VINOD PRIYA (1)
Published on

ಚಿತ್ರದುರ್ಗ: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಾಗುವ ಅಪಘಾತಗಳನ್ನು ನಿಯಂತ್ರಿಸಲು ಸುರಕ್ಷತಾ ಕ್ರಮ ಕೈಗೊಳ್ಳದ ರಾ.ಹೆ.ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಎಸ್ಪಿ ಜಿ.ರಾಧಿಕಾ ಅವರಿಗೆ ಡಿಸಿ ಆರ್.ವಿನೋತ್ ಪ್ರಿಯಾ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿ, ನಗರದಲ್ಲಿ ಪ್ರಮುಖವಾಗಿ ಹಾದು ಹೋಗಿರುವ ರಾ.ಹೆ.48 ಹಾಗೂ 50ರಲ್ಲಿ ವಾಹನಗಳ ದಟ್ಟಣೆ ಹೆಚ್ಚಿದೆ. ಶಿರಾದಿಂದ ಹಿರಿಯೂರು-ಚಿತ್ರದುರ್ಗ ಮಾರ್ಗದಲ್ಲಿ ಹೆಚ್ಚಿನ ಅಪಘಾತಗಳಾಗುತ್ತಿವೆ ಎಂದರು.

ಈ ಮಾರ್ಗದ ಅಪಘಾತ ಪ್ರದೇಶಗಳಲ್ಲಿ ಸುರಕ್ಷತಾ ಸೂಚನಾ ಫಲಕ, ಬ್ಲಿಂಕರ್ಸ್‌, ರಿಫ್ಲೆಕ್ಟರ್ಸ್‌, ಕೆಲವೆಡೆ ಸಿಸಿ ಟಿವಿ ಕ್ಯಾಮರಾ ಅಳವಡಿಕೆ, ಝೀಬ್ರಾ ಕ್ರಾಸ್ ಗುರುತು ಸೇರಿ ಹಲವು ಕ್ರಮಗಳಿಗೆ ಹಾಗೂ ಆ್ಯಂಬುಲೆನ್ಸ್‌ಗಳ ಸಂಖ್ಯೆ ಹೆಚ್ಚಳಕ್ಕೆ ಸೂಚಿಸಿದ್ದರೂ ಪ್ರಾಧಿಕಾರ ಅಧಿಕಾರಿಗಳು ನಿರ್ದೇಶನ ಪಾಲಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಿರಿಯೂರು ಪ್ರವೇಶದ ಬಳಿಯ ಡಾಬಗಳ ಮುಂದೆ ಚಾಲಕರು ವಾಹನಗಳನ್ನು ಮನಸೋ ಇಚ್ಛೆ ನಿಲ್ಲಿಸುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಅಧಿಕಾರಿಗಳಿಗೆ ಜನರ ಜೀವದ ಬಗ್ಗೆ ಕಾಳಜಿಯಿಲ್ಲವೆಂದು ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಡಿವೈಎಸ್ಪಿ ಪಾಂಡುರಂಗ ಮಾತನಾಡಿ, ನಗರ ಸಮೀಪದ ರಾ.ಹೆ.48ರ ಖಾಸಗಿ ಹೋಟೆಲ್‌ವೊಂದರ ಮಾಲೀಕರು ಹೆದ್ದಾರಿಯಿಂದ ಅಕ್ರಮವಾಗಿ ಮಾರ್ಗ ಕಲ್ಪಿಸಿದ್ದರೂ ಕ್ರಮ ಜರುಗಿಸಿಲ್ಲ ಎಂದರು. ಸ್ಥಳ ಪರಿಶೀಲಿಸಿ ಕ್ರಮಕ್ಕೆ ಡಿಸಿ ಪೊಲೀಸರಿಗೆ ಸೂಚಿಸಿದರು.

ಜಿಲ್ಲೆಯಲ್ಲಿ 36 ಕಪ್ಪು ಚುಕ್ಕೆ ವಲಯಗಳನ್ನು ಗುರುತಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಇಇ ಎನ್.ಸತೀಶ್‌ಬಾಬು ಹೇಳಿದರು. ನಗರದ ಎಪಿಎಂಸಿ ಒಳಗೆ ಬಸ್‌ಗಳ ಸಂಚಾರಕ್ಕೆ ಎಪಿಎಂಸಿ ಜಂಟಿ ನಿರ್ದೇಶಕ ಮಹೇಶ್ ಅಸಮಾಧಾನ ವ್ಯಕ್ತಪಡಿಸಿದರು.
ಆರ್‌ಟಿಒ ಜಿ.ಎಸ್.ಹೆಗಡೆ, ಎಎಸ್ಪಿ ಎಂ.ಬಿ.ನಂದಗಾವಿ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ವಹಣಾ ಇಂಜಿನಿಯರ್ ಮಹೇಂದ್ರ, ಕೆಎಸ್‌ಆರ್‌ಟಿಸಿ ಡಿಸಿ ವಿಜಯಕುಮಾರ್ ಮತ್ತಿತರ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net