ಲಾಕ್‌ಡೌನ್ ಮಧ್ಯೆ ರೋಗಿಗಳಿಗೆ ’108’ ಆಸರೆ

Ambulence
Published on

ಚಿತ್ರದುರ್ಗ: ನಮ್ಮ ಆರೋಗ್ಯದ ನೂರೆಂಟು ತಾಪತ್ರಯಗಳಿಗೆ ತುರ್ತು ಸನ್ನಿವೇಶದಲ್ಲಿ ತಟ್ಟಂಥ ನೆನಪಾಗುವುದು 108 ವಾಹನ.

ಬಸ್, ರೈಲು, ಖಾಸಗಿ ವಾಹನಗಳ ಸಂಚಾರವಿಲ್ಲದ ಲಾಕ್‌ಡೌನ್‌ನ ಈ ಸಂದರ್ಭದಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲಿರುವ ಏಕೈಕ ಆಸರೆ 108.

ಆಂಬುಲೆನ್ಸ್ ಸಿಬ್ಬಂದಿ ಬೆಳಗ್ಗೆ 8ರಿಂದ ರಾತ್ರಿ 8 ಹಾಗೂ ರಾತ್ರಿ 8ರಿಂದ ಬೆಳಗ್ಗೆ 8 ರವರೆಗೆ ತಲಾ 12 ತಾಸು 2 ಪಾಳಿಗಳಲ್ಲಿ ಪ್ರಾಣ ಪಣಕ್ಕಿಟ್ಟು ಆರೋಗ್ಯ ಸೇವೆಯಲ್ಲಿ ನಿರತರಾಗಿದ್ದಾರೆ.

ಪ್ರಸ್ತುತ ಸಂದರ್ಭದಲ್ಲಿ 108 ವಾಹನದ ಸಿಬ್ಬಂದಿಗೆ ರಜೆ ಕೊಡದಂತೆ ಸೇವೆಯ ಉಸ್ತುವಾರಿ ಹೊತ್ತ ಆಯಾ ಜಿಲ್ಲಾ ವ್ಯವಸ್ಥಾಪಕರಿಗೆ ಜಿಲ್ಲಾಧಿಕಾರಿ ಕೂಡ ಸೂಚಿಸಿದ್ದಾರೆ.

ದಿನಕ್ಕೆ 10 ಸಾವಿರಕ್ಕೂ ಅಧಿಕ ಕರೆಗಳು: ಬೆಂಗಳೂರಲ್ಲಿರುವ 108 ಆಂಬುಲೆನ್ಸ್ ನಿಯಂತ್ರಣ ಕಚೇರಿಗೆ ದಿನಕ್ಕೆ 10 ಸಾವಿರಕ್ಕೂ ಅಧಿಕ ಕರೆಗಳು ಬರುತ್ತಿವೆ. ಬಂದ ಕರೆಗಳನ್ನು ಆಯಾ ಜಿಲ್ಲೆಗಳಿಗೆ ವರ್ಗಾಯಿಸಲಾಗುತ್ತಿದೆ.

ಸವಾಲು ಸ್ವೀಕರಿಸಿದ ಸಿಬ್ಬಂದಿ: ಆರೋಗ್ಯದ ತುರ್ತು ಅರಿತಿರುವ ಸಿಬ್ಬಂದು ಈ ಸನ್ನಿವೇಶವನ್ನು ಸವಾಲಾಗಿ ಸ್ವೀಕರಿಸಿ ಆರೋಗ್ಯ ಸೇವೆ ಒದಗಿಸುತ್ತಿದ್ದಾರೆ. ಕರೊನಾ ಭೀತಿ ಹಿನ್ನೆಲೆಯಲ್ಲಿ ಪ್ರತಿ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ದ ಬಳಿಕ ವಾಹನವನ್ನು ಡಿಸ್‌ಇನ್ಫೆಕ್ಷನ್ ಮಾಡಿದ ಬಳಿಕವೆ ಮತ್ತೊಬ್ಬ ರಿಗೆ ಸರ್ವಿಸ್ ಕೊಡಲಾಗುತ್ತಿದೆ.

ಚಿತ್ರದುರ್ಗದಲ್ಲಿ 24 ವಾಹನಗಳು: ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಸ್ತುತ 24 ವಾಹನಗಳಿವೆ. ಚಳ್ಳಕೆರೆ -5,ಚಿತ್ರದುರ್ಗ-7,ಹಿರಿಯೂರು- 4,ಹೊಳಲ್ಕೆರೆ - 3, ಹೊಸದುರ್ಗ - 2, ಮೊಳಕಾಲ್ಮೂರಲ್ಲಿ 3 ವಾಹನಗಳಿವೆ ಒಟ್ಟು 110 ಸಿಬ್ಬಂದಿ ಕರ್ತವ್ಯದಲ್ಲಿದ್ದಾರೆ.

108 ವಾಹನ ಜಿಲ್ಲಾ ವ್ಯವಸ್ಥಾಪಕ ಎಸ್.ಎನ್.ಬೂದನಗೌಡ ಹೇಳಿಕೆ: ಲಾಕ್‌ಡೌನ್ ಬಳಿಕ ಆಂಬುಲೆನ್ಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. 108 ಕ್ಕೆ ಬರುವ ಕರೆಗಳ ಜತೆಗೆ ಕರೊನಾ ಸಹಾಯವಾಣಿ 104ಕ್ಕೆ ಬರುವ ಕೋರಿಕೆಗಳಿಗೂ ಸ್ಪಂದಿಸಬೇಕಿದೆ. ಜಿಲ್ಲಾಧಿಕಾರಿ ನಿರ್ದೇಶನದಂತೆ ಸಿಬ್ಬಂದಿ ರಜೆ ಹೋಗದೆ ಪಾಳಿ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಸಿಬ್ಬಂದಿಗೆ ಪಿಪಿಇ ಕಿಟ್ ಒದಗಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net