ಸೆಲ್ಫಿ ಪ್ರಿಯರ ತಾಣ ಕೋವಿಡ್ ಆಸ್ಪತ್ರೆ ಆವರಣ

CTD 19 COVID (2)
Published on

ಚಿತ್ರದುರ್ಗ: ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಕೋವಿಡ್-19 ಆಸ್ಪತ್ರೆಯ ರಸ್ತೆಯನ್ನು ಶುಕ್ರವಾರ ಮತ್ತೆ ಸೀಲ್‌ಡೌನ್ ಮಾಡಲಾಗಿದೆ!

ಮತ್ತೆ ಕರೊನಾ ಸೋಂಕಿತರು ಬಂದರಾ ಎಂದು ಭಯಪಡಬೇಡಿ. ಇದಕ್ಕೆ ಕಾರಣವಾಗಿರುವುದು ಸೆಲ್ಫಿ ಪ್ರಿಯರು. ಅವರ ಕಾಟದಿಂದ ಎಚ್ಚೆತ್ತ ಆರೋಗ್ಯ ಇಲಾಖೆ ಇಂಥದೊಂದು ನಿರ್ಧಾರಕ್ಕೆ ಬಂದಿದೆ.

ಆಗಿದ್ದೇನು ಅಂತೀರಾ?: ಜಿಲ್ಲಾಸ್ಪತ್ರೆ ಆವರಣದಲ್ಲಿ 11 ಕೋಟಿ ರೂ.ವೆಚ್ಚದಲ್ಲಿ 50 ಹಾಸಿಗೆಗಳ ತಾಯಿ ಮಗು ಆಸ್ಪತ್ರೆ ಕಟ್ಟಡ ನಿರ್ಮಾಣವಾಗುತ್ತಿದೆ. ಜಿ ಪ್ಲಸ್ ಒನ್ ಮಾದರಿಯ ಕಟ್ಟಡದ ಕಾಮಗಾರಿ 2 ವರ್ಷಗಳ ಹಿಂದೆ ಆರಂಭವಾಗಿದ್ದರೂ ಪೂರ್ಣಗೊಂಡಿಲ್ಲ.

ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಕಟ್ಟಡವನ್ನು ಅಂದಾಜು 80 ಲಕ್ಷ ರೂ. ಪ್ರತ್ಯೇಕ ವೆಚ್ಚದಲ್ಲಿ ಕೋವಿಡ್ ಆಸ್ಪತ್ರೆಯನ್ನಾಗಿ ಸಜ್ಜುಗೊಳಿಸಿತು. ಜಿಲ್ಲೆಯ 43 ಕರೊನಾ ಸೋಂಕಿತರ ಪೈಕಿ 16 ಮಂದಿಗೆ ಚಿಕಿತ್ಸೆ ಕೊಡಲಾಗಿತ್ತು. ಇದಕ್ಕಾಗಿ ಜೋಗಿಮಟ್ಟಿ ಸರ್ಕಲ್‌ನಿಂದ ಖಾಸಗಿ ಬ್ಯಾಂಕ್‌ವರೆಗಿನ ರಸ್ತೆ ಹಾಗೂ ಆಸ್ಪತ್ರೆ ಎದುರು ರಸ್ತೆಯನ್ನು ಬಂದ್ ಮಾಡಲಾಗಿತ್ತು. ಜೂ.14 ರಂದು ರೋಗಿಗಳೆಲ್ಲ ಇಲ್ಲಿಂದ ಡಿಸ್ಚಾರ್ಜ್ ಆಗಿದ್ದರು.

ನಂತರ ಜೋಗಿಮಟ್ಟಿ ರಸ್ತೆ ನಿರ್ಬಂಧ ತೆರವುಗೊಳಿಸಿದ್ದು, ಆಸ್ಪತ್ರೆ ಮುಂಭಾಗದ ರಸ್ತೆಯಲ್ಲಿ ಪೊಲೀಸರ ಕಾವಲಿತ್ತು. ಕೆಲ ದಿನಗಳಿಂದ ಸಾರ್ವಜನಿಕರನ್ನು ಕೋವಿಡ್ ಕಟ್ಟಡ ಸೆಲ್ಫಿ ತಾಣವಾಗಿ ಆಕರ್ಷಿಸತೊಡಗಿತ್ತು. ಎಚ್ಚೆತ್ತ ಆರೋಗ್ಯ ಇಲಾಖೆ ಪೊಲೀಸರ ನೆರವಿನೊಂದಿಗೆ ಆಸ್ಪತ್ರೆ ಎದುರಿನ ಸಂಚಾರಕ್ಕೆ ಮತ್ತೆ ನಿರ್ಬಂಧ ಹೇರಿದೆ.

ಕೆಲಕಾಲ ಆತಂಕ: ಪೊಲೀಸರು ಬ್ಯಾರಿಕೇಡ್ ಹಾಕುತ್ತಿದ್ದಂತೆ ಮತ್ತೆ ಮೂರ‌್ನಾಲ್ಕು ಪಾಸಿಟಿವ್ ಬಂದಿವೆಯಂತೆ ಎಂಬ ವದಂತಿ ಹರಡಿತು. ಈ ಕುರಿತಂತೆ ಪತ್ರಿಕೆ ಜತೆ ಮಾತನಾಡಿದ ಡಿಎಚ್‌ಒ ಡಾ.ಸಿ.ಎಲ್.ಪಾಲಾಕ್ಷ, ವಿನಾ ಕಾರಣ ಕೋವಿಡ್ ಕಟ್ಟಡದ ಆವರಣದಲ್ಲಿ ಸಾರ್ವಜನಿಕರ ಓಡಾಟ, ಅದರಲ್ಲೂ ಸೆಲ್ಫಿ ಪ್ರಿಯರ ಹಾವಳಿ ಹೆಚ್ಚಾಗಿದ್ದರಿಂದ ನಿರ್ಬಂಧ ಅನಿವಾರ‌್ಯವಾಯಿತು ಎಂದು ತಿಳಿಸಿದರು.

76 ಮಾದರಿ ನೆಗೆಟಿವ್: ಜಿಲ್ಲೆಯಲ್ಲಿ ಶುಕ್ರವಾರ ಪರೀಕ್ಷೆಗೆ ಒಳಪಡಿಸಿದ 76 ಜನರ ಗಂಟಲು, ಮೂಗು ದ್ರವ ಮಾದರಿ ನೆಗೆಟಿವ್ ಬಂದಿದ್ದು, ಸದ್ಯ ಜಿಲ್ಲೆಯಲ್ಲಿ 2671 ಜನ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಈವರೆಗೆ 4290 ಜನರ ಮಾದರಿ ಸಂಗ್ರಹಿಸಲಾಗಿದ್ದು, 4123 ಜನರ ವರದಿ ನೆಗೆಟಿವ್ ಬಂದಿದೆ. ಉಳಿದ 126 ಮಾದರಿಗಳನ್ನು ತಿರಸ್ಕರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net