ನಿವೃತ್ತ ಪೌರ ನೌಕರರಿಗೆ ಅನ್ಯಾಯ ಸಲ್ಲದು

NARAYANACHAR L
Published on

ಚಿತ್ರದುರ್ಗ: ನಿವೃತ್ತ ಪೌರಸೇವಾ ನೌಕರರ ಕುರಿತು ರಾಜ್ಯ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ನಿವೃತ್ತ ಪೌರಸೇವಾ ನೌಕರರ ಸಂಘದ ರಾಜ್ಯಾಧ್ಯಕ್ಷ ಎಲ್.ನಾರಾಯಣಾಚಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಿವೃತ್ತಿ ಹೊಂದಿ 80 ವರ್ಷ ಪೂರೈಸಿದ ರಾಜ್ಯ ಸರ್ಕಾರಿ ನೌಕರರಿಗೆ ಒಂದು ಹೆಚ್ಚುವರಿ ವೇತನ ನೀಡುವಂತೆ ಸರ್ಕಾರವು 1-1-2019ರಂದು ಆದೇಶ ಹೊರಡಿಸಿತ್ತು. ಇದರಂತೆ 80 ವರ್ಷ ಸೇವೆ ಪೂರೈಸಿದ ನಿವೃತ್ತ ಪೌರಸೇವಾ ನೌಕರರಿಗೆ ವೇತನ ನೀಡುವ ಕುರಿತು 27-8-2019ರಂದು ಆದೇಶ ಮಾಡಿತ್ತು. ಇದರಿಂದ ನಿವೃತ್ತ ಪೌರಸೇವಾ ನೌಕರರು ಆರು ತಿಂಗಳ ಸೌಲಭ್ಯದಿಂದ ವಂಚಿತರಾದರು ಎಂದು ದೂರಿದರು.

ಅಲ್ಲದೇ ನಿವೃತ್ತ ನೌಕರರಿಗೆ ಈ ಸೌಲಭ್ಯವನ್ನು ಸ್ಥಳೀಯ ಸಂಸ್ಥೆಗಳಿಂದಲೇ ಭರಿಸತಕ್ಕದ್ದೆಂದು ಆದೇಶಿಸಿತ್ತು. ಈ ಕುರಿತು ಸಂಘವು ಒಂದು ವರ್ಷ ನಿರಂತರ ಹೋರಾಟ ನಡೆಸಿದ ಪರಿಣಾಮ ಸರ್ಕಾರ ತನ್ನ ನಿರ್ಧಾರ ಬದಲಿಸಿತ್ತು. ನಿವೃತ್ತ ಪೌರಸೇವಾ ನೌಕರರು ಸಹ ಒಂದು ಹೆಚ್ಚುವರಿ ವೇತನವನ್ನು ರಾಜ್ಯದ ಸಂಚಿತ ನಿಧಿಯಿಂದಲೇ ಪಡೆಯುವಂತೆ 28-8-2020ರಂದು ಆದೇಶಿಸಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಈ ಸೌಲಭ್ಯಕ್ಕೆ ಅರ್ಹರಾಗಿರುವ ಪೌರಸೇವಾ ನೌಕರರ ಸಂಖ್ಯೆ ಕೇವಲ 20ರಿಂದ 25 ಇರಬಹುದು. ಇವರಿಗೆ ಸೌಲಭ್ಯ ಕಲ್ಪಿಸಲು ವಾರ್ಷಿಕ 3 ಲಕ್ಷ ರೂ. ಹೆಚ್ಚುವರಿ ಆಗಬಹುದು. ಅನಗತ್ಯ ಕಾರ್ಯಗಳಿಗೆ ಹಣ ವ್ಯಯಿಸುವ ಬದಲು ಸರ್ಕಾರಿ ನಿವೃತ್ತ ನೌಕರರಿಗೆ ನೀಡಿ ಅವರ ಹಿತ ಕಾಪಾಡಬೇಕೆಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net