

ಚಿತ್ರದುರ್ಗ: ಆನ್‌ಲೈನ್ ಪರೀಕ್ಷೆ ಪದ್ಧತಿ ಕೈ ಬಿಡುವಂತೆ ಹಾಗೂ ಪರೀಕ್ಷಾ ಶುಲ್ಕ ಹೆಚ್ಚಳ ಹಿಂಪಡೆಯುವಂತೆ ಆಗ್ರಹಿಸಿ ಐಟಿಐ ವಿದ್ಯಾರ್ಥಿಗಳು ನಗರದ ಒನಕೆ ಓಬವ್ವ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಎಐಡಿವೈಒ ಮುಖಂಡ ಆರ್.ಲಿಂಗರಾಜ್ ಮಾತನಾಡಿ, ಪ್ರಾಯೋಗಿಕ ಕಲಿಕೆಯನ್ನೇ ಸಮರ್ಥವಾಗಿ ಪ್ರದರ್ಶಿಸ ಬೇಕಿರುವ ವಿದ್ಯಾರ್ಥಿಗಳಿಗೆ, ಆನ್‌ಲೈನ್ ಪರೀಕ್ಷೆ ಪದ್ಧತಿಯನ್ನು ಜಾರಿಗೊಳಿಸುವ ಸರ್ಕಾರದ ನಿರ್ಧಾರ ಅವೈಜ್ಞಾನಿಕವಾಗಿದೆ ಎಂದು ಆಕ್ರೋಶ ವ್ಯಕ್ಕತಪಡಿಸಿದರು.
ಐಟಿಐ ತರಬೇತಿಯಲ್ಲಿ ಥಿಯರಿಗಿಂತ ಪ್ರಾಕ್ಟಿಕಲ್ ಹೆಚ್ಚು ಮಹತ್ವದ್ದಾಗಿದೆ ಎಂಬುದನ್ನು ಸರ್ಕಾರ ಮರೆತಂತಿದೆ. ಇನ್ನು ಪರೀಕ್ಷಾ ದುಬಾರಿ ಶುಲ್ಕ ಅಸಂಖ್ಯ ಬಡ ವಿದ್ಯಾರ್ಥಿಗಳಿಗೆ ಹೊರೆಯಾಗಿದೆ. ಗಾಯದ ಮೇಲೆ ಬರೆ ಎಳೆದಂತೆ ಶುಲ್ಕಕ್ಕೆ ಜಿಎಸ್‌ಟಿ ಸೇರ್ಪಡೆ ಮಾಡಿರುವುದು ಜನವಿರೋಧಿ ಆಗಿದೆ ಎಂದು ದೂರಿದರು.
ಕೂಡಲೇ ರಾಜ್ಯ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದು ಕೌಶಲ ಆಧರಿತ ತರಬೇತಿ ಪಡೆಯುತ್ತಿರುವ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ನೆರವಾಗಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ವಿದ್ಯಾರ್ಥಿ ಮುಖಂಡರಾದ ಸಂಜಯ್, ಮಂಜುನಾಥ್, ಮಲ್ಲಿಕಾರ್ಜುನ್ ಮತ್ತಿತರರು ಪಾಲ್ಗೊಂಡಿದ್ದರು.