ಕಲಾವಿದರಿಗೆ ನೆರವಿನ ಹಸ್ತ ಚಾಚಿ

Published on

ಚಿತ್ರದುರ್ಗ: ಕರೊನಾದಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ಜನಪದ ಕಲಾವಿದರಿಗೂ ನೆರವಿನ ಹಸ್ತವನ್ನು ಚಾಚಬೇಕೆಂದು ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಹೇಳಿದರು.

ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದಿಂದ ಕಬೀರಾನಂದಾಶ್ರಮದಲ್ಲಿ ಬುಧವಾರ ಏರ್ಪಡಿಸಿದ್ದ ವೃತ್ತಿ ನಿರತ ಅಸಂಘಟಿತ ಜಾನಪದ ಕಲಾವಿದರಿಗೆ ಆಹಾರಧಾನ್ಯ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಲಾವಿದರಿಗೂ ಇಂದು ನೆಮ್ಮದಿ ಇಲ್ಲದಂತಾಗಿದ್ದು, ಅವರಿಗೆ ನೆರವು ನೀಡುವಂಥ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು ಮುಂದಾಗಬೇಕು ಎಂದರು.

ಪರಿಷತ್ ಜಿಲ್ಲಾಧ್ಯಕ್ಷ ಅಧ್ಯಕ್ಷ ಡಾ.ಜೆ.ಕರಿಯಪ್ಪ ಮಾಳಿಗೆ ಮಾತನಾಡಿ, ಲಾಕ್‌ಡೌನ್‌ನಿಂದಾಗಿ, ಸಭೆ, ಸಮಾರಂಭ, ಉತ್ಸವ, ಜಾತ್ರೆ ಹಾಗೂ ಸರ್ಕಾರಿ ಕಾರ್ಯಕ್ರಮಗಳಿಲ್ಲದೆ ಕಲಾವಿದರು ಜೀವನ ನಡೆಸುವುದು ದುಸ್ತರವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಶ್ರೀ ಶಿವಲಿಂಗಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪರಿಷತ್ ಕಾರ್ಯದರ್ಶಿ ನಿರಂಜನ ದೇವರಮನೆ, ದಾನಿಗಳಾದ ಕೆ.ಸಿ.ರುದ್ರೇಶ್, ಡಿ.ಆರ್.ಶಂಕರಯ್ಯ, ತನುಜಾ ದೇವರಮನೆ, ಎಸ್.ಶಿವಶಂಕರಗೌಡ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net