ಜಿಪಂ ಕೈ ಸದಸ್ಯರಲ್ಲೇ ಕಿತ್ತಾಟ

CTD 10 ZP (1)
Published on

ಚಿತ್ರದುರ್ಗ: ನಿಯಾಮಾನುಸಾರ ಈ ಸಭೆ ಕರೆದಿಲ್ಲವೆಂಬ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಆಕ್ಷೇಪದಿಂದಾಗಿ ಬುಧವಾರ ಕರೆದಿದ್ದ ಜಿಪಂ ವಿಶೇಷ ಸಾಮಾನ್ಯ ಸಭೆ ಆರಂಭದಲ್ಲಿಯೇ ಕೆಲ ಕಾಲ ಗೊಂದಲದ ಗೂಡಾಯಿತು.

ಜತೆಗೆ ಆಡಳಿತಾರೂಢ ಕಾಂಗ್ರೆಸ್ ಸದಸ್ಯರ ನಡುವೆಯೇ ಮಾತಿನ ಜಟಾಪಟಿಗೆ ಕಾರಣವಾಯಿತು.

ಸಭೆ ಆರಂಭವಾಗುತ್ತಿದ್ದಂತೆ ಆಕ್ಷೇಪ ವ್ಯಕ್ತಪಡಿಸಿದ ಸೌಭಾಗ್ಯ, ಸಾಮನ್ಯ, ವಿಶೇಷ ಸಭೆಗಳನ್ನು ಕರೆಯಲು ಇರುವ ನಿಯಮಗಳನ್ನು ವಿವರಿಸುವಂತೆ ಪಟ್ಟು ಹಿಡಿದರು.

ಅಧ್ಯಕ್ಷೆ ಶಶಿಕಲಾ ಸೂಚನೆಯಂತೆ, ಸಿಪಿಒ ಟಿ.ಶಶಿಧರ್, ಸಾಮಾನ್ಯ ಸಭೆಗೆ 10 ದಿನಗಳ ಮೊದಲು ಹಾಗೂ ವಿಶೇಷ ಸಭೆಗೆ 7 ದಿನ ಮುನ್ನ ಸದಸ್ಯರಿಗೆ ತಿಳಿವಳಿಕೆ ಕಳಿಸಬೇಕು ಎಂದರು.ಶ್ರಿ

ಅದಾದ ಬಳಿಕವೂ ಆಗಿರುವ ಲೋಪಗಳ ಕುರಿತಂತೆ ಮಾತನಾಡುತ್ತಿದ್ದ ಕಾಂಗ್ರೆಸ್ ಉಚ್ಛಾಟಿತ ಸದಸ್ಯೆ ಸೌಭಾಗ್ಯ ಬಸವರಾಜನ್ ನಡೆಗೆ ಕಾಂಗ್ರೆಸ್ಸಿನ ಬಿ.ಯೋಗೇಶ್‌ಬಾಬು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆ ಸಮಸ್ಯೆಗಳ ಕುರಿತು ಚರ್ಚಿಸೋಣ ಎಂದು ಪಟ್ಟು ಹಿಡಿದಾಗ, ಕಾಂಗ್ರೆಸ್ಸಿನ ಮತ್ತೊಬ್ಬ ಸದಸ್ಯ ಆರ್.ಕೃಷ್ಣಮೂರ್ತಿ, ನಿಯಮಗಳನ್ನು ಓದಲಿ ಬಿಡಿ ಎಂದರು.

ಆಗ ಬಾಬು ಮತ್ತು ಮೂರ್ತಿ ಮತ್ತಿತರರ ನಡುವೆ ಮಾತಿನ ಚಕಮಕಿ ನಡೆಯಿತು.

ಈ ಹಂತದಲ್ಲಿ ಸಭಾಧ್ಯಕ್ಷರೆದುರಿಗೆ ಧಾವಿಸಿದ ಬಾಬು, ಸೌಭಾಗ್ಯ, ಆರ್.ನಾಗೇಂದ್ರನಾಯಕ್, ಜಿ.ಟಿ.ಅಜ್ಜಪ್ಪ, ಕೆ.ಸಿ.ಮಹೇಶ್ವರಪ್ಪ, ಆರ್.ಗೀತಾ ನಾಗಕುಮಾರ್ ಇತರರು ಧಾವಿಸಿದ್ದರಿಂದಾಗಿ ಗೊಂದಲ ಗೂಡಾಯಿತು.

ಯಾರೂ ಯಾರಿಗೆ ಏನೂ ಹೇಳುತ್ತಿದ್ದಾರೆಂಬುದು ಸ್ಪಷ್ಟವಾಗಿ ಕೇಳಿಸಿದಂತಾಯಿತು. ಕೆಲ ಕಾಂಗ್ರೆಸ್ ಸದಸ್ಯರು ನಿಮ್ಮ ಅವಧಿಯಲ್ಲೂ ಲೋಪಗಳಾಗಿವೆ ಎಂದು ಸೌಭಾಗ್ಯ ವಿರುದ್ಧ ಆರೋಪಿಸಿದರು. ಅಧ್ಯಕ್ಷೆ ಶಶಿಕಲಾ ಕೂಡ ದನಿ ಕೂಡಿಸಿದರು.

ಸ್ಥಾಯಿ ಸಮಿತಿ ಕುರಿತ ಚರ್ಚೆಗೆ ಸಭೆ ಕರೆಯಲು ತಿಳಿಸಿದ್ದೇ. ಆದರೆ, ಅಧಿಕಾರಿಗಳು ತಪ್ಪಾಗಿ ಅರ್ಥೈಸಿ ಕೊಂಡು ಸಮಿತಿಗಳಿಗೆ ಚುನಾವಣೆ ನಡೆಯಲಿದೆ ಎಂದು ನೋಟಿಸ್ ಕೊಟ್ಟಿದ್ದರು. ಆನಂತರದಲ್ಲಿ ತಿದ್ದುಪಡಿಯೊಂದಿಗೆ ವಿಶೇಷ ಸಭೆ ತಿಳಿವಳಿಕೆ ಕಳಿಸಲಾಗಿದ್ದು, ಸಭೆ ಮುಂದುವರಿಯಲಿದೆ ಎಂದು ಅಧ್ಯಕ್ಷೆ ಪ್ರಕಟಿಸಿದ ಬಳಿಕ ಸಭೆ ಪಾಲನಾ ವರದಿ ಚರ್ಚೆಗೆ ಮುಂದಾಯಿತು.

ಮುಂಡರಗಿ ನಾಗರಾಜ್, ಸಿ.ಬಿ.ಪಾಪಣ್ಣ, ಬಿ.ಪಿ.ಪ್ರಕಾಶಮೂರ್ತಿ, ಆರ್.ನರಸಿಂಹರಾಜ, ಜಿ.ಎಂ.ವಿಶಾಲಾಕ್ಷಿ ನಟರಾಜ್, ಕೆ.ಎಸ್.ಜಯಪ್ರತಿಭಾ, ಕೆ.ಟಿ.ಗುರುಮೂರ್ತಿ, ಕೆ.ಅನಂತ್, ಡಿ.ಕೆ.ಶಿವಮೂರ್ತಿ, ಕೆ.ಟಿ.ಗುರುಮೂರ್ತಿ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಜಿಪಂ ಉಪಾಧ್ಯಕ್ಷೆ ಸುಶೀಲಮ್ಮ, ಸಿಇಒ ಟಿ.ಯೋಗೇಶ್ ಇದ್ದರು.

ಸರ್ಕಾರಕ್ಕೆ ಪತ್ರ: ರಾಮಮಂದಿರ ನಿರ್ಮಾಣಕ್ಕಾಗಿ ಸ್ಥಾಪಿಸಿರುವ ಶ್ರೀಜನ್ಮ ಭೂಮಿ ಟ್ರಸ್ಟ್‌ಗೆ ರಾಜನಹಳ್ಳಿ ವಾಲ್ಮೀಕಿ ಶ್ರೀಗಳನ್ನು ಸದಸ್ಯರನ್ನಾಗಿ ನೇಮಿಸಬೇಕೆಂಬ ಹಿಂದಿನ ಸಾಮಾನ್ಯ ಸಭೆಯ ನಿರ್ಣಯಕ್ಕೆ ಸಂಬಂಧಿಸಿ ಸಮಾಜ ಕಲ್ಯಾಣ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಉಪ ಕಾರ್ಯದರ್ಶಿ ಡಾ.ಎಸ್.ರಂಗಸ್ವಾಮಿ ಸಭೆಗೆ ಮಾಹಿತಿ ನೀಡಿದರು.

ನೂತನ ಸಿಇಒ ಮಾತಾಡ್ಲಿ: ತಾವು ಹೊಸಬರಿದ್ದೀರಿ, ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಜಿಲ್ಲೆಯವರೇ ಆಗಿದ್ದೀರಿ. ಆದ್ದರಿಂದ ಸಭೆಯಲ್ಲಿ ನೀವೂ ಮಾತನಾಡಲೇ ಬೇಕು ಎಂದು ಸಿಇಒ ಯೋಗೇಶ್ ಅವರಿಗೆ ಕೃಷ್ಣಮೂರ್ತಿ ಸಲಹೆ ನೀಡಿದರು.

ಅನುದಾನ ಮರಳಿ ಕೊಡುವಂತೆ ಸರ್ಕಾರಕ್ಕೆ ಪತ್ರ ಬರೆಯಲು ಹಾಗೂ ಶುಕ್ರವಾರ ಚಿತ್ರದುರ್ಗಕ್ಕೆ ಬರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪಗೆ ಮನವಿ ಸಲ್ಲಿಸಲು ಸಭೆ ನಿರ್ಣಯಿಸಿತು.

ಇಇ ಸುಭಾನ್ ಅವರಿಗೆ ನೋಟಿಸ್ ಕೊಡುವುದರೊಂದಿಗೆ, ಸೂಕ್ತ ಕ್ರಮವನ್ನೂ ಜರುಗಿಸುವುದಾಗಿ ಅಧ್ಯಕ್ಷರು ಪ್ರಕಟಿಸಿದರು.

ಗುರುಮೂರ್ತಿ ವಿಷಯ ಪ್ರಸ್ತಾಪಿಸುತ್ತಿದ್ದಂತೆ ದನಿಗೂಡಿಸಿದ ಹಲವು ಸದಸ್ಯರು, ಯಾರಿಂದ ತಪ್ಪಾಗಿದೆ? ಇದನ್ನು ಹೇಗೆ ಮರಳಿ ಪಡೆಯಬೇಕು? ಗುತ್ತಿಗೆದಾರರು ವಿಷ ಕುಡಿಯಬೇಕಾ ಎಂಬಿತ್ಯಾದಿ ಆಕ್ರೋಶ ಭರಿತ ಪ್ರಶ್ನೆಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.

ಥರ್ಡ್‌ಪಾರ್ಟಿ ಇನ್ಸ್ಪೆಕ್ಷನ್ ಏಜೆನ್ಸಿ ನೇಮಕ ವಿಳಂಬವೂ ಅನುದಾನ ಹಿಂದಕ್ಕೆ ಹೋಗಲು ಕಾರಣವಾಗಿರುವುದಾಗಿ ಸಿಎಒ ಕೆ.ಎಚ್.ಓಂಕಾರಪ್ಪ ತಿಳಿಸಿದರು.

ಇವರಿಂದಾಗಿ 24.49 ಕೋಟಿ ರೂ. ಹಿಂದಕ್ಕೆ ಹೋಗುವಂತಾಗಿದೆ ಎಂದು ಇಲಾಖೆ ಇಇ ಸುಭಾನ್‌ಸಾಬ್ ವಿರುದ್ಧ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ರಸ್ತೆ ದುರಸ್ತಿ, ನೆರೆ ಹಾನಿ, ಕೆರೆಗಳ ನಿರ್ವಹಣೆ, ಟಾಸ್ಕ್‌ಪೋರ್ಸ್ ಸಹಿತ ವಿವಿಧ ಶೀರ್ಷಿಕೆಗಳಡಿ ಜಿಲ್ಲೆಗೆ ಬಿಡುಗಡೆಯಾಗಿದ್ದ ಅನುದಾನ ಹಿಂದಕ್ಕೆ ಕಳಿಸಿದ ಪಂ.ರಾಜ್ ಇಂಜಿನಿಯರಿಂಗ್ ಇಲಾಖೆ ಇಇ ವಿರುದ್ಧ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು.

24 ಕೋಟಿ ರೂ. ಅನುದಾನ ವಾಪಸ್ಸು, ಸದಸ್ಯರ ಆಕ್ರೋಶ:

ಸರ್ಕಾರಕ್ಕೆ ಶಿಫಾರಸು: ಕಳೆದ ಆರ್ಥಿಕ ಸಾಲಿನಲ್ಲಿ ಜಿಪಂ ವ್ಯಾಪ್ತಿ ಇಲಾಖೆಗಳ ಅನುದಾನ ಬಳಕೆಯಾಗದೆ ವಾಪಾಸ್ಸು ಆಗಿರುವುದಕ್ಕೆ ಕಾರಣಗಳೇನು ಎಂಬುದನ್ನು ಪರಿಶೀಲಿಸಿ ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಶಶಿಕಲಾ ತಿಳಿಸಿದರು.

ವಾರಿಯರ್ಸ್‌ಗೆ ಕೃತಜ್ಞತೆ: ಕೋವಿಡ್-19 ಸೋಂಕು ಹತೋಟಿಗೆ ಶ್ರಮಿಸುತ್ತಿರುವ ಸರ್ಕಾರಿ, ಖಾಸಗಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಬೇಕೆಂದು ಗೀತಾ ಹೇಳಿಕೆಗೆ ಇತರ ಸದಸ್ಯರು ಧ್ವನಿಗೂಡಿಸಿದರು. ಕೆಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಅವಧಿ ಮೀರಿದ ಮಾತ್ರೆಗಳ ವಿತರಿಸಲಾಗುತ್ತಿದೆ ಎಂದು ಅಧ್ಯಕ್ಷರು ಹೇಳಿದಾಗ ಪರಿಶೀಲಿಸುವುದಾಗಿ ಡಿಎಚ್‌ಒ ಡಾ.ಸಿಎಲ್.ಪಾಲಾಕ್ಷ ತಿಳಿಸಿದರು.

75 ಲಕ್ಷ ಮಾನವ ದಿನ ಗುರಿ: ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ನರೇಗಾ ಯೋಜನೆಯಡಿ 75 ಲಕ್ಷ ಮಾನವ ದಿನ ಸೃಜನೆ ಗುರಿ ಹೊಂದಲಾಗಿದೆ ಎಂದು ಜಿಪಂ ಉಪ ಕಾರ್ಯದರ್ಶಿ ಡಾ.ಎಸ್.ರಂಗಸ್ವಾಮಿ ಸಭೆಗೆ ಮಾಹಿತಿ ನೀಡಿದರು. ರೇಷ್ಮೆ ಇಲಾಖೆಗೆ 2 ಲಕ್ಷ ಮಾನವ ದಿನ ಸೃಜನೆ ಗುರಿ ಇದ್ದು, ಈಗಾಗಲೇ 15,982 ಮಾನವ ದಿನ ಸೃಜನೆ ಮಾಡಲಾಗಿದೆ. ಗಿಡ ನಾಟಿ ಮತ್ತು ನಿರ್ವಹಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.

ತೋಟಗಾರಿಕೆ ಇಲಾಖೆಯಲ್ಲಿ ಬದು ನಿರ್ಮಾಣ ಜತೆಗೆ ತೆಂಗು ಮತ್ತು ಮಾವು ಪುನಃಶ್ಚೇತನಕ್ಕೆ ಮಾರ್ಗಸೂಚಿ ಬಂದಿದೆ. ನರೇಗಾ ಯೋಜನೆಯಡಿ ಪ್ರತಿ ಫಲಾನುಭವಿಗೆ 2 ಲಕ್ಷ ರೂ. ಮೀರದಂತೆ ಕಾಮಗಾರಿ ಕೈಗೊಳ್ಳಲು ಅನುಮತಿ ಇದೆ.
ಸವಿತಾ ಉಪನಿರ್ದೇಶಕಿ
ತೋಟಗಾರಿಕೆ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net