ಕರೊನಾ ವಿರುದ್ಧ ಗೆಲುವು ಸಾಧಿಸಿದ ಬಾಲೆ

CTD CARONA 30
Published on

ಚಿತ್ರದುರ್ಗ: ಕರೊನಾ ಸೋಂಕು ದೃಢಪಟ್ಟು ಜಿಲ್ಲಾ ಕೇಂದ್ರದಲ್ಲಿರುವ ಕೋವಿಡ್-19 ಆಸ್ಪತ್ರೆಗೆ ದಾಖಲಾಗಿದ್ದ ಮೂರು ವರ್ಷದ ಬಾಲಕಿ ಸಹಿತ ನಾಲ್ವರು ಚೇತರಿಸಿಕೊಂಡಿದ್ದು, ಶನಿವಾರ ಬಿಡುಗಡೆಗೊಂಡರು.

ಮೇ 8 ಮತ್ತು 9ರಂದು ದಾಖಲಾಗಿದ್ದ ತಬ್ಲಿಘಿ ಜಮಾತ್ ಆರು ಸದಸ್ಯರ ಪೈಕಿ, ನಾಲ್ವರು ಮೇ 23ರಂದು ಮನೆಗೆ ತೆರಳಿದ್ದರು.

ಇನ್ನೂ ಆಸ್ಪತ್ರೆಯಲ್ಲಿ ಉಳಿದಿದ್ದ ತಬ್ಲಿಘಿ ಜಮಾತ್‌ನ ಇಬ್ಬರು ಸದಸ್ಯರು ಹಾಗೂ ಮೇ 15ರಂದು ದಾಖಲಾಗಿದ್ದ ಚಳ್ಳಕೆರೆ ತಾಲೂಕು ಗ್ರಾಮವೊಂದರ ತಂದೆ, ಮಗಳು ಇಬ್ಬರು ಶನಿವಾರ ಬಿಡುಗಡೆಗೊಂಡರು.

ಈ ವೇಳೆ ಹಾಜರಿದ್ದ ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ, ಪುಷ್ಪ ಗುಚ್ಛ ನೀಡಿ ಬೀಳ್ಕೊಟ್ಟರು. ಚೇತರಿಸಿಕೊಂಡವರ ಮೇಲೆ ವೈದ್ಯಕೀಯ ಸಿಬ್ಬಂದಿ ಹೂಮಳೆ ಸುರಿಸಿ ಶುಭ ಕೋರಿದರು. ಸ್ವತಃ ಜಿಲ್ಲಾಧಿಕಾರಿ, ಮೂರು ವರ್ಷದ ಪುಟಾಣಿ ಕೈಗೆ ಹೂವು ಕೊಟ್ಟು ಮಾತನಾಡಿಸಿದರು.

ಬಿಡುಗಡೆ ಸಂಭ್ರಮದಲ್ಲಿದ್ದ ನಾಲ್ವರು, ತಮಗೆ ಚಿಕಿತ್ಸೆ ನೀಡಿದ ವೈದ್ಯಕೀಯ ಸಿಬ್ಬಂದಿ, ವೈದ್ಯರು ಹಾಗೂ ಅಧಿಕಾರಿ ವರ್ಗಕ್ಕೆ ಕೃತಜ್ಞತೆ ಸಲ್ಲಿಸಿದರು.

ನಮ್ಮ ಹೆಸರು, ವಿಳಾಸವನ್ನು ಬಹಿರಂಗ ಪಡಿಸದಂತೆ ಜಿಲ್ಲಾಧಿಕಾರಿ ಅವರಲ್ಲಿ ಚಳ್ಳಕೆರೆ ತಾಲೂಕಿನ ವ್ಯಕ್ತಿ ಮನವಿ ಮಾಡಿಕೊಂಡರು.

64 ವರ್ಷದ ಪುರುಷ ಮಾತನಾಡಿ, ವೈದ್ಯರು, ಆಸ್ಪತ್ರೆ ಸಿಬ್ಬಂದಿ ಸಹಕಾರ ಮರೆಯಲು ಸಾಧ್ಯವಿಲ್ಲ. ನಮ್ಮನ್ನು ಅವರ ಮನೆಯ ಸದಸ್ಯರಂತೆ ಉಪಚರಿಸಿದ್ದಾರೆ. ಆತ್ಮಸ್ಥೈರ್ಯ ತುಂಬಿದ್ದಾರೆ. ನಮಗೆ ಪುನರ್ಜನ್ಮ ನೀಡಿದ ಎಲ್ಲರಿಗೂ ನಾವು ಚಿರಋಣಿ ಎಂದು ಸ್ಮರಿಸಿದರು.

ಇದೇ ವೇಳೆ ಮನೆಗೆ ತೆರಳಿದ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಿ, 14 ದಿನಗಳ ಕಾಲ ಕಡ್ಡಾಯವಾಗಿ ಹೋಂ ಕ್ವಾರಂಟೈನ್‌ನಲ್ಲಿರುವಂತೆ ಆಸ್ಪತ್ರೆಯ ಸಿಬ್ಬಂದಿ ತಿಳಿಸಿದರು.

ಜಿಪಂ ಸಿಇಒ ಎಸ್.ಹೊನ್ನಾಂಬ, ಡಿಎಚ್‌ಒ ಡಾ.ಸಿ.ಎಲ್.ಪಾಲಾಕ್ಷ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಚ್.ಜೆ.ಬಸವರಾಜಪ್ಪ, ಕೋವಿಡ್ ಆಸ್ಪತ್ರೆ ನೋಡಲ್ ಅಧಿಕಾರಿ ಡಾ.ಪ್ರಕಾಶ್, ಡಾ.ದೇವರಾಜ್ ಸುರಹೊನ್ನೆ, ಡಾ.ಪ್ರಕಾಶ್ ಕಬ್ಬದ್, ಡಾ.ಸ್ಪೂರ್ತಿ, ಡಾ.ರುದ್ರೇಶ್, ಡಾ.ಕಮಲಾ, ಮಲ್ಲಿಕಾರ್ಜುನ್, ಶುಶ್ರೂಷಕರಾದ ಮಲ್ಲಣ್ಣ, ನೇತ್ರಾವತಿ ಸೇರಿ ಹಿರಿಯ-ಕಿರಿಯ ವೈದ್ಯಕೀಯ ಅಧಿಕಾರಿ ಹಾಗೂ ಸಿಬ್ಬಂದಿ ಇದ್ದರು.

ಜೋಗಿಮಟ್ಟಿ ರಸ್ತೆ ಸಂಚಾರಕ್ಕೆ ಮುಕ್ತ: ಕೋವಿಡ್ ಆಸ್ಪತ್ರೆಗೆ ರೋಗಿಗಳು ದಾಖಲಾದ ಮೇ 8ರಿಂದ ನಗರದ ಜೋಗಿಮಟ್ಟಿ ರಸ್ತೆ ಪ್ರವೇಶಕ್ಕೆ ವಿಧಿಸಲಾಗಿದ್ದ ನಿರ್ಬಂಧವನ್ನು ಶನಿವಾರ ತೆರವುಗೊಳಿಸಲಾಯಿತು. ರಂಗಯ್ಯನ ಬಾಗಿಲು ಹಾಗೂ ಮದಕರಿ ಸರ್ಕಲ್‌ನಿಂದ ಜೋಗಿಮಟ್ಟಿ ರಸ್ತೆಯ ಬ್ಯಾಂಕ್‌ವೊಂದರ ಶಾಖೆಯ ವರೆಗೆ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಸದ್ಯ ಆಸ್ಪತ್ರೆ ಮುಂದಿನ ರಸ್ತೆಯಲ್ಲಿ ಸಂಚಾರ ನಿರ್ಬಂಧವನ್ನು ಮುಂದುವರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net