ಅತ್ಯಾಚಾರಿಗೆ 20 ವರ್ಷ ಕಠಿಣ ಸಜೆ

COURTdownload
Published on

ಚಿತ್ರದುರ್ಗ: ಬಾಲಕಿಯನ್ನು ಬೆದರಿಸಿ ಅತ್ಯಾಚಾರ ಎಸಗಿ, ಗರ್ಭಧರಿಸಲು ಕಾರಣನಾಗಿದ್ದ ಅಪರಾಧಿ ತಿಮ್ಮರಾಜುಗೆ 2ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ 20 ವರ್ಷ ಕಠಿಣ ಸಜೆ ಹಾಗೂ 60 ಸಾವಿರ ರೂ. ದಂಡ ವಿಧಿಸಿದೆ.

ಕೃತ್ಯಕ್ಕೆ ನೆರವು ನೀಡಿದ್ದ ಆರೋಪದಡಿ ವಿಚಾರಣೆ ಎದುರಿಸುತ್ತಿದ್ದ ಮತ್ತೊಬ್ಬ ಆರೋಪಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

8ನೇ ತರಗತಿಯಲ್ಲಿ ಓದುತ್ತಿದ್ದ ಹಿರಿಯೂರು ಗ್ರಾಮಾಂತರ ಠಾಣೆ ವ್ಯಾಪ್ತಿಯ ನೊಂದ ಬಾಲಕಿ, ತನ್ನೂರಿನಿಂದ ಹಿರಿಯೂರಿನ ಶಾಲೆಗೆ ನಿತ್ಯ ಆಟೋದಲ್ಲಿ ಬಂದು ಹೋಗುತ್ತಿದ್ದಳು.

ಈ ವೇಳೆ ಮತ್ತೊಬ್ಬ ಆರೋಪಿಯ ನೆರವಿನೊಂದಿಗೆ ಬಾಲಕಿಯನ್ನು ಬೆದರಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ತಿಮ್ಮರಾಜು ವಿರುದ್ಧ ನೊಂದ ಬಾಲಕಿಯ ತಾಯಿ ಪೊಲೀಸರಿಗೆ ದೂರಿದ್ದರು.

ಪೊಸ್ಕೊ ಕಾಯ್ದೆಯಡಿ ಪ್ರಕರಣ ದಾಖಲಿಸಿ, ತನಿಖೆ ನಡೆಸಿದ್ದ ಸಿಪಿಐ ಕೆ.ಟಿ.ಗುರುರಾಜ್ ಹಾಗೂ ಪಿಎಸ್‌ಐ ಈ.ಶಿವಕುಮಾರ್ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ್ದ ಅಪರ ಜಿಲ್ಲಾ ನ್ಯಾಯಾಧೀಶ ಬನ್ನಿಕಟ್ಟಿ ಹನುಮಂತಪ್ಪ, ಅಪರಾಧಿ ತಿಮ್ಮರಾಜುವಿಗೆ ಶಿಕ್ಷೆ ವಿಧಿಸಿ ಹಾಗೂ ದಂಡ ಹಣದಲ್ಲಿ 40 ಸಾವಿರ ರೂ. ಗಳನ್ನು ನೊಂದ ಬಾಲಕಿಗೆ ಕೊಡುವಂತೆ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಜಯರಾಮ್ ವಾದಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net