ಗಮಕ ಕಲಿಕೆಗೆ ನಿರಾಸಕ್ತಿ

CTD 18 GAMAKA 2
Published on

ಚಿತ್ರದುರ್ಗ: ಪ್ರಸ್ತುತ ಗಮಕ ಕಲಿಕೆ ವಿದ್ಯಾರ್ಥಿಗಳ ಸಂಖ್ಯೆ ವ್ಯಾಪಕವಾಗಿ ಕ್ಷೀಣಿಸಿದೆ ಎಂದು ಕರ್ನಾಟಕ ಗಮಕ ಕಲಾ ಪರಿಷತ್ ಅಧ್ಯಕ್ಷೆ ಗಂಗಮ್ಮ ಕೇಶವಮೂರ್ತಿ ವಿಷಾದಿಸಿದರು.

ಕವಿ ಕುಮಾರ ವ್ಯಾಸ ಜಯಂತ್ಯುತ್ಸವ ಅಂಗವಾಗಿ ಗಮಕ ಕಲಾ ಪರಿಷತ್, ಗಮಕ ಕಲಾಭಿಮಾನಿಗಳ ಹಾಗೂ ಬ್ರಾಹ್ಮಣ ಸಂಘದಿಂದ ನಗರದ ಶಾರದಾ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕುಮಾರವ್ಯಾಸ ಭಾರತ ಆದಿಪರ್ವದ 7ನೇ ಮತ್ತು 8ನೇ ಸಂಧಿಯ ಗಮಕ ವಾಚನ-ವ್ಯಾಖ್ಯಾನ ಮತ್ತು ಸಾಹಿತ್ಯ ಸಮಾರಾಧನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡ ಕಲಿಕೆಗೆ ನಿರಾಸಕ್ತಿ ಇರುವ ಇಂದಿನ ಸನ್ನಿವೇಶದಲ್ಲಿ, ಗಮಕ ಕಲಿಯಲು ಹೇಗೆ ಮುಂದೆ ಬಂದಾರು? ವಿದ್ಯಾರ್ಥಿಗಳಲ್ಲಿದೆ ಪರಿಷತ್ ನಡೆಸುವುದೇ ಕಷ್ಟವಾಗಿದೆ. ಮೊದಲೆಲ್ಲ 10 ವಿದ್ಯಾರ್ಥಿಗಳಿಗೆ ಒಂದು ಕೇಂದ್ರ ಹಾಗೂ ಗಮಕ ಕುರಿತು ಪ್ರಥಮ, ಪ್ರವೇಶ, ಪ್ರೌಢ ಇತ್ಯಾದಿ ಐದು ಪರೀಕ್ಷೆಗಳಿಗೆ ಇದ್ದ ನಿಯಮ ಸಡಿಲಗೊಳಿಸಿದ್ದರೂ ಕಲಿಸುವವರು, ಕಲಿಯುವವರು ಮುಂದೆ ಬರುತ್ತಿಲ್ಲ. ಪರಿಷತ್ ಪ್ರಕಟಿಸಿ ಪಠ್ಯ ಇತ್ಯಾದಿ ಕೃತಿಗಳ ಖರೀದಿಸುವವರೂ ಇಲ್ಲವಾಗಿ,ಪರಿಷತ್‌ನ್ನು ನಡೆಸುವುದೇ ಕಷ್ಟವಾಗುತ್ತಿದೆ ಎಂದು ಬೇಸರಿಸಿ ದರು. ಕುಮಾರವ್ಯಾಸ ಪ್ರಶಸ್ತಿಯೊಂದಿಗೆ ಘೋಷಿಸಿರುವ 5 ಲಕ್ಷ ರೂ.ಗಳನ್ನು ಪರಿಷತ್ ಕಟ್ಟಡಕ್ಕೆ ಕೊಡುವುದಾಗಿ ಹೇಳಿದ್ದೇನೆ. ಆದರೆ ಸರ್ಕಾರದಿಂದ ಇನ್ನು ಹಣ ಬಂದಿಲ್ಲ ಎಂದರು.

ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್.ಮಂಜುನಾಥ ಮಾತನಾಡಿ, ಚಿತ್ರದುರ್ಗ ಬರಪೀಡಿತ ಜಿಲ್ಲೆಯಾದರೂ ಇಲ್ಲಿ ಕಲೆ ಮತ್ತು ಸಂಸ್ಕೃತಿಗೆ ಬೆಲೆ ಕೊಡುವ ಅಭಿಮಾನಿಗಳಿದ್ದಾರೆ. ಗಮಕ ಕಲೆಗೆ ಸರ್ಕಾರ ಸೂಕ್ತ ಪ್ರೋತ್ಸಾಹಿಸಬೇಕೆಂದರು.

ಜಿಲ್ಲಾ ಗಮಕ ಪರಿಷತ್ ಪ್ರತಿನಿಧಿ ಡಾ.ಕೆ.ರಾಜೀವ್ ಲೋಚನ ಮಾಡಿ, ರಾಜ್ಯದ ಅನೇಕರಿಗೆ ಕುಮಾರ ವ್ಯಾಸನ ಅಧ್ಯಯನಕ್ಕೆ ಪ್ರಸನ್ನ ಪ್ರೇರಣೆ ನೀಡಿದ್ದಾರೆ ಎಂದರು.

ಗಮಕಿ ಡಾ.ಎ.ವಿ.ಪ್ರಸನ್ನ ಕಾರ್ಯಕ್ರಮ ಉದ್ಘಾಟಿಸಿದರು. ಪರಿಷತ್ ಜಿಲ್ಲಾಧ್ಯಕ್ಷೆ ಅಧ್ಯಕ್ಷೆ ಕೆ.ಆರ್.ರಮಾದೇವಿ ಇದ್ದರು. ಶಾಂತಾ ಗೋಪಾಲ ಸ್ವಾಗತಿಸಿದರು. ವಿದ್ಯಾರ್ಥಿಗಳು ಗಮಕ ವಾಚಿಸಿದರು.

ಗಮಕ ಕಲೆ ಉಳಿಸುವುದೇ ದೊಡ್ಡ ಸೇವೆ: ಗಮಕದಿಂದ ಸಾಹಿತ್ಯ ಸ್ವಾರಸ್ಯ ಅರಿಯಲು ಸಾಧ್ಯ. ಗಮಕ ಕಾರ್ಯಕ್ರಮಗಳಿಗೆ ರಾಜ್ಯದ ಎಲ್ಲಿಂದಲೇ ಆಹ್ವಾನ ಬಂದರೂ ತೆರಳಲು ತಯಾರಿದ್ದೇನೆ ಎಂದು ಗಮಕಿ ಡಾ.ಎ.ವಿ.ಪ್ರಸನ್ನ ತಿಳಿಸಿದರು. ಪ್ರಯಾಣದ ವೆಚ್ಚ, ಸಂಭಾವನೆ ಯಾವುದೂ ಬೇಡ. ಗಮಕವನ್ನು ಉಳಿಸಿ, ಬೆಳೆಸಲು ವಿದ್ಯಾರ್ಥಿಗಳನ್ನು ತಯಾರು ಮಾಡುವುದು ನನ್ನ ಗುರಿ. ಇದೇ ಈ ಕಲೆಗೆ ಸಲ್ಲಿಸುವ ದೊಡ್ಡ ಸೇವೆಯಾಗಿದೆ. ಪರಿಷತ್ ಪ್ರಾರಂಭಿಸಿರುವ ಕುಮಾರವ್ಯಾಸ ಜಯಂತಿಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸದೇ ಅದ್ಧೂರಿಯಾಗಿ ಮುಂದುವರಿಸ ಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net