ಅಧ್ಯಕ್ಷ ಸ್ಥಾನ ಹುದ್ದೆಯಲ್ಲ ಹೊಣೆ

BJP katil
Published on

ಚಿತ್ರದುರ್ಗ: ಪಕ್ಷದ ಅಧ್ಯಕ್ಷ ಸ್ಥಾನ ಹುದ್ದೆಯಲ್ಲ. ಅದು ಜವಾಬ್ದಾರಿ ಎಂಬ ಅರಿವು ನನ್ನನ್ನು ಸೇರಿ ವಿವಿಧ ಘಟಕಗಳ ಹುದ್ದೆಯಲ್ಲಿ ಕುಳಿತವರಿಗೆ ಇರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಹೇಳಿದರು.

ನಗರದ ಉಮಾಪತಿ ಕಲ್ಯಾಣ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿಜೆಪಿ ನೂತನ ಜಿಲ್ಲಾಧ್ಯಕ್ಷರ ಅಧಿಕಾರ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪಕ್ಷಕ್ಕೆ ಸಂಘಟನೆ ಮಾಡುವವರು ಬೇಕೆ ಹೊರತು, ನೇತಾಡುವವರಿಗೆ ಜಾಗವಿಲ್ಲ. ಆಂಜನೇಯ ಹೇಗೆ ಪ್ರತಿ ವಸ್ತುವಿನಲ್ಲೂ ರಾಮನನ್ನು ಕಾಣುತ್ತಾನೋ ಹಾಗೆಯೇ ಕಾರ್ಯಕರ್ತನಿಗೆ ಎಲೆಲ್ಲೂ ಕಮಲ ಕಾಣಬೇಕು. ಬಿಜೆಪಿಯ ಸಂಘಟನಾತ್ಮಕ 37 ಜಿಲ್ಲೆಗಳ ಪೈಕಿ 35 ಜಿಲ್ಲಾಧ್ಯಕ್ಷರ ನೇಮಕವಾಗಿದ್ದು, ದೇಶಾದ್ಯಂತ ಇಂದು ಹೊಸ ತರುಣ ಪಡೆಯೇ ಸಂಘಟನೆಗೆ ಸಜ್ಜಾಗಿದೆ. ಚಿತ್ರದುರ್ಗದಲ್ಲಿ ಉಳಿದಿರುವ ಒಂದು ಶಾಸಕ ಸ್ಥಾನವನ್ನು ಗೆಲ್ಲಬೇಕಿದೆ ಎಂದರು.

ಬೂತ್‌ನಿಂದ ರಾಷ್ಟ್ರ ಮಟ್ಟವರೆಗೆ ಹೊಸ ಅಧ್ಯಕ್ಷರನ್ನು ನೇಮಿಸಿರುವುದು ಬಿಜೆಪಿ ವಿಶೇಷ ನಡೆ. ಪಕ್ಷದ ಕಾರ್ಯಕರ್ತರು ದೇವರಿದ್ದಂತೆ ಎಂದರು.

ಜನರ ಕಣ್ಣೊರೆಸುವ ಮುಖ್ಯಮಂತ್ರಿ ಬೇಕೊ ಅಥವಾ ಅಧಿಕಾರ ಇದ್ದಾಗ ಕಣ್ಣಿರು ಹಾಕುವ ಮುಖ್ಯಮಂತ್ರಿ ಬೇಕೋ ಎಂದು ಪ್ರಶ್ನಿಸುವ ಮೂಲಕ, ಜನ ಯಡಿಯೂಪ್ಪರನ್ನು ಬಯಸುತ್ತಿದ್ದಾರೆ. ಆದ್ದರಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸುಭದ್ರ ಎಂದು ಹೇಳಿದರು.

ಪ್ರಭಾರಿ ಜಿ.ಎಂ.ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಕಟ ಪೂರ್ವ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ಅವರು ನೂತನ ಅಧ್ಯಕ್ಷ ಎ.ಮುರುಳಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಜಿಲ್ಲೆ ಎಲ್ಲ ಮಂಡಲ ಅಧ್ಯಕ್ಷರನ್ನು ರಾಜ್ಯಾಧ್ಯಕ್ಷರು ಗೌರವಿಸಿದರು.

ಮುಖಂಡರಾದ ಲಿಂಗಮೂರ್ತಿ, ಟಿ.ಜಿ.ನರೇಂದ್ರನಾಥ್, ಡಿ.ಟಿ.ಶ್ರೀನಿವಾಸ್, ಜಿ.ಎಸ್.ಅನಿತ್, ಸಿದ್ದೇಶ್ ಯಾದವ್, ಬದ್ರಿನಾಥ್, ುಲ್ಲಿಕಾರ್ಜುನ್, ಜಯಪಾಲಯ್ಯ, ಮಾಜಿ ಶಾಸಕರಾದ ಮಸ್ಕಲ್ ಆರ್.ರಾಮಯ್ಯ, ಪಿ.ರಮೇಶ್ ಮತ್ತಿತರ ಪ್ರಮುಖರು ಇದ್ದರು.

ಕಾಂಗ್ರೆಸ್ ಒಡೆದ ಮನೆ: ಕಾಂಗ್ರೆಸ್ ಒಡೆದ ಮನೆ, ಕೆಪಿಸಿಸಿ, ಪ್ರತಿಪಕ್ಷ ಸ್ಥಾನಕ್ಕೆ ನೇಮಿಸಲು ಆರು ತಿಂಗಳಾದರೂ ಪಕ್ಷದ ವರಿಷ್ಠರಿಗೆ ಸಾಧ್ಯವಾಗಿಲ್ಲ. ಸಿದ್ದರಾಮಯ್ಯರನ್ನು ಕಂಡರೆ ಡಿಕೆಶಿಗೆ ಆಗದು, ಇವರಿಬರಲ್ಲಿ ಯಾರಿಗೆ ಮಣೆ ಹಾಕಿದರೂ ಪರಮೇಶ್ವರ್ ಸಹಿಸಲ್ಲ. ಹೊಸ ನೇಮಕಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ಸಿನಲ್ಲಿ ಬಂಡಾಯ ಏಳಲಿದೆ. ಪಕ್ಷ ಮುನ್ನಡೆಸಲಾಗದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಂದ ದೇಶದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಕಟೀಲ್ ಪ್ರಶ್ನೀಸಿದರು.

ಪೌರತ್ವ ಕಾಯ್ದೆ ಜಾರಿ ಗಾಂಧಿ, ಸಿಂಗ್ ಆಶಯ: ಪೌರತ್ವ ಕಾಯ್ದೆಗೆ ಕಾಂಗ್ರೆಸ್ ಕಾರಣ, ದೇಶ ವಿಭಜನೆ ವೇಳೆ ಪಾಕಿಸ್ತಾನ ಅಲ್ಪಸಂಖ್ಯಾತರಿಗೆ ಪೌರತ್ವ ಕೊಡಬೇಕೆಂದು ಮೊದಲಿಗೆ ಹೇಳಿದ್ದು ಮಹಾತ್ಮ ಗಾಂಧಿ. ಬಳಿಕ ಮನಮೋಹನ್ ಸಿಂಗ್ ಕೂಡ ಕಾಯ್ದೆ ಜಾರಿಗೆ ಒತ್ತಾಯಿಸಿದ್ದರು ಎಂದು ಕಟೀಲ್ ಹೇಳಿದರು.

ಇದರ ಅರಿವಿದ್ದರೂ ಕೇಂದ್ರದ ವಿರುದ್ಧ ಮಾತನಾಡಲೂ ಏನೂ ವಿಷಯ ಸಿಗದೇ ಭೌತಿಕವಾಗಿ ದಿವಾಳಿ ಆಗಿರುವ ಕಾಂಗ್ರೆಸ್, ಸಿಎಎ ವಿಷಯವನ್ನು ಇಟ್ಟುಕೊಂಡು ದೇಶದಲ್ಲಿ ಶಾಂತಿ ಕದಡುತ್ತಿದೆ ಎಂದು ದೂರಿದರು.

370ನೇ ವಿಧಿ ರದ್ದು, ತಲಾಖ್, ರಾಮಮಂದಿರ ಹಾಗೂ ಸಿಎಎ ವಿಷಯದಲ್ಲಿ ಪ್ರಧಾನಿ ಬುದ್ಧಿವಂತಿಕೆ, ಧೈರ್ಯ ತೋರಿದ್ದಾರೆ. ಭಾರತವನ್ನು ಜಗತ್ ಮಾನ್ಯ ಮಾಡುವ ಉದ್ದೇಶವಿದೆ ಹೊರತು, ಅಧಿಕಾರ ಬಿಜೆಪಿಯ ಗುರಿಯಲ್ಲ ಎಂದು ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net