

ಚಿತ್ರದುರ್ಗ: ಜಿಲ್ಲೆಯ ಜನಪ್ರತಿನಿಧಿಗಳ ರಾಜಕೀಯ ನಿತ್ರಾಣದಿಂದಾಗಿ ಐತಿಹಾಸಿಕ ಜಿಲ್ಲೆ ಚಿತ್ರದುರ್ಗಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಭಾರೀ ಅನ್ಯಾಯವಾಗಿದ್ದು, ಇದರ ವಿರುದ್ಧ ಹೋರಾಟ ರೂಪಿಸುವುದು ಅನಿವಾರ್ಯವಾಗಿದೆ ಎಂದು ಸ್ವರಾಜ್ ಇಂಡಿಯಾದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ ಹೇಳಿದರು.
ರಾಜಕೀಯವಾಗಿ ಪ್ರಬಲವಾಗಿರುವ ಜನಪ್ರತಿನಿಧಿಗಳಿರುವ ಜಿಲ್ಲೆಗಳಿಗೆ ಸಾವಿರಾರು ಕೋಟಿ ರೂ. ನೀಡಿದ್ದು, ಅನುದಾನ ಹಂಚಿಕೆಯಲ್ಲಿ ಯಾವುದೇ ವೈಜ್ಞಾನಿಕ ಮಾನದಂಡವನ್ನು ಅನುಸರಿಸಲಾಗಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಭದ್ರಾ ಮೇಲ್ದಂಡೆ ಯೋಜನೆ, ಸರ್ಕಾರಿ ಮೆಡಿಕಲ್ ಕಾಲೇಜು ಹಾಗೂ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗದ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಬಜೆಟ್‌ನಲ್ಲಿ ಪ್ರಸ್ತಾಪಿಸಿಲ್ಲ ಎಂದು ಬೇಸರಿಸಿದರು.
ಜಿಲ್ಲೆಯಲ್ಲಿ ಐವರು ಬಿಜೆಪಿ ಶಾಸಕರು ಹಾಗೂ ಒಬ್ಬ ಬಿಜೆಪಿ ಸಂಸದರಿದ್ದರೂ, ಸಿಎಂ ಅವರನ್ನು ಪ್ರಶ್ನಿಸುವ ಧೈರ್ಯ ಯಾರೊಬ್ಬರಿಗೂ ಇಲ್ಲ. ಜಿಲ್ಲೆ ಅಭಿವೃದ್ಧಿಗೆ ಪಕ್ಷಾತೀತ ಪ್ರಾಮಾಣಿಕ ಪ್ರಯತ್ನ ಆಗಬೇಕಿದೆ. ಮಹದಾಯಿ, ಎತ್ತಿನಹೊಳೆಗೆ ಹಣ ಬಿಡುಗಡೆ ಮಾಡಿದ್ದೂ ಭದ್ರಾಕ್ಕೆ ಬಿಡುಗಡೆ ಆಗಿಲ್ಲ, ನಮ್ಮ ಜಿಲ್ಲೆ ಜನ ಏನು ಪಾಪ ಮಾಡಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಶಂಕರಪ್ಪ ಮಾತನಾಡಿ, ಜಿಲ್ಲೆಗೆ ಆಗಿರುವ ಅನ್ಯಾಯದ ವಿರುದ್ಧ ಸ್ವರಾಜ್ ಇಂಡಿಯಾ, ರೈತಸಂಘ ಮತ್ತಿತರ ಸಂಘಟನೆಗಳ ಜತೆಗೂಡಿ ಹೋರಾಟ ರೂಪಿಸುವುದಾಗಿ ಹೇಳಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‌ಬಾಬು, ಮುಖಂಡರಾದ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ರವಿಕುಮಾರ್, ಹಂಪಯ್ಯನಮಾಳಿಗೆ ಧನಂಜಯ ಇತರರು ಉಪಸ್ಥಿತರಿದ್ದರು.