ವಿನಾಕಾರಣ ಕರೋನಾ ಆತಂಕ ಬೇಡ

CTD 05 TP
Published on

ಚಿತ್ರದುರ್ಗ: ಕೆಮ್ಮು, ಶೀತ, ಜ್ವರವಿದ್ದಾಕ್ಷಣ ಕರೊನಾ ಸೋಂಕು ತಗುಲಿದೆ ಎಂದು ವಿನಾ ಕಾರಣ ಆತಂಕ ಬೇಡ. 14 ದಿನಗಳ ನಂತರ ಈ ಲಕ್ಷಣಗಳು ಮುಂದುವರಿದಲ್ಲಿ ಗಂಟಲು ದ್ರವದ ಸ್ಯಾಂಪಲ್‌ನ್ನು ಪ್ರಯೋಗಾಲಯಕ್ಕೆ ಕಳುಹಿಸಬಹುದು. ರಾಜ್ಯದಲ್ಲೆಲ್ಲೂ ಕರೊನಾ ಭೀತಿ ಇಲ್ಲವೆಂದು ತಾಲೂಕು ವೈದ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.

ತಾಪಂ ಕೆಡಿಪಿ ಸಭೆಯಲ್ಲಿ ಅಧ್ಯಕ್ಷ ಡಿ.ಎಂ.ಲಿಂಗರಾಜು ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿ, ಬೆಂಗಳೂರಿಗೆ ಬಂದಿದ್ದ ತೆಲಂಗಾಣದ ಟೆಕ್ಕಿಗೆ ಸೋಂಕು ತಗುಲಿರುವುದನ್ನು ಹೊರತು ಪಡಿಸಿದರೆ ರಾಜ್ಯದಲ್ಲಿ ಇನ್ಯಾವುದೇ ಪ್ರಕರಣ ವರದಿ ಆಗಿಲ್ಲ. ವಿನಾಕಾರಣ ಭಯ ಬೇಡ. ಜನರು ಮುಗಿ ಬಿದ್ದು ಮಾಸ್ಕ್‌ಗಳನ್ನು ಖರೀದಿಸುವುದೂ ಅಗತ್ಯವಿಲ್ಲವೆಂದರು.

14 ದಿನದೊಳಗೆ ರೋಗಿ ಗಂಟಲು ದ್ರವದ ಪರೀಕ್ಷೆ ಆದರೆ ನೆಗೆಟಿವ್ ಎಂದೇ ಬರುತ್ತದೆ. ಆದ್ದರಿಂದ ವಿಂಡೊಪಿರಿಯಡ್ ಮುಗಿದ ಬಳಿಕವೇ ಶಂಕಿತ ರೋಗಿ ಸ್ಯಾಂಪಲ್ ಪರೀಕ್ಷಿಸಿದರೆ ಸೋಂಕು ಖಚಿತಪಡಿಸಿಕೊಳ್ಳಬಹುದು ಎಂದು ತಿಳಿಸಿದರು.

ಕರೊನಾ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ 5, ತಾಲೂಕು ಆಸ್ಪತ್ರೆಯಲ್ಲಿ 2 ಹಾಸಿಗೆಗಳ ಪ್ರತ್ಯೇಕ ವಾರ್ಡ್‌ಗಳನ್ನು ಸಿದ್ಧಪಡಿಸಲಾಗಿದೆ. ವೈಯಕ್ತಿಕ ಸ್ವಚ್ಛತೆಗೆ ಜನರು ಹೆಚ್ಚಿನ ಆದ್ಯತೆ ಕೊಡಬೇಕು ಎಂದರು.

ತಾಪಂ ಕಚೇರಿಯಲ್ಲಿ ಒಂದು ಕೊಳವೆ ಬಾವಿ ಕೊರೆಸುವಂತೆ ಎಇಇ ದಯಾನಂದಸ್ವಾಮಿಗೆ ಇಒ ಎಚ್.ಕೃಷ್ಣನಾಯಕ್ ಹೇಳಿದರು. ಮಾಧ್ಯಮದವರು ಹೋದ ಬಳಿಕ ಈ ಮಾತು ಹೇಳಬೇಕೆಂದಿದ್ದೆ. ಶೌಚಗೃಹಕ್ಕೂ ನೀರಿಲ್ಲದಂತಾಗಿದೆ. ಕೋಟ್ಯಂತರ ರೂ. ಅನುದಾನದಲ್ಲಿ ಒಂದು ಕೊಳವೆ ಬಾವಿ ಕೊರೆಸಲು ಆಗುವುದಿಲ್ಲವೇ ಎಂದು ಬೇಸರ ವ್ಯಕ್ತಪಡಿಸಿದರು.

ಈ ಕಚೇರಿ ಗ್ರಾಮಾಂತರ ಪ್ರದೇಶದಲ್ಲಿ ಇಲ್ಲ. ಬಿಲ್ ಪಾವತಿ ಹೇಗೆ? ಆದರೂ ಪ್ಲಾನ್‌ನಲ್ಲಿ ಸೇರಿಸುತ್ತೇನೆ, ಗುರುವಾರವೇ ಕೊಳವೆ ಬಾವಿ ಕೊರೆಸುತ್ತೇನೆ ಎಂದು ಎಇಇ ಹೇಳಿದರು.

15 ಲಕ್ಷ ರೂ. ಗಿಂತ ಕಡಿಮೆ ಮೊತ್ತದಲ್ಲಿ ಅಂಗನವಾಡಿ ಕಟ್ಟಡಗಳ ನಿರ್ಮಾಣ ಅಸಾಧ್ಯವೆಂದು ಕೆಆರ್‌ಐಡಿಎಲ್ ಅಧಿಕಾರಿ ಸ್ಪಷ್ಟಪಡಿಸಿದರು.

ತಾಲೂಕಿನಲ್ಲಿ 6485 ವಿದ್ಯಾರ್ಥಿಗಳು ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆಂದು ಬಿಇಒ ಬಿ.ಸಿದ್ದಪ್ಪ ಹೇಳಿದರು.

ಇತ್ತೀಚೆಗೆ ನಿರ್ಮಿಸಿರುವ ಹೊಸ ಕಟ್ಟಡಕ್ಕೆ ಫ್ಯಾನ್, ವಿದ್ಯುತ್ ಸಂಪರ್ಕಕ್ಕೆ 10 ಲಕ್ಷ ರೂ. ಅನುದಾನವಿದೆ ಎಂದು ಇಒ ಹೇಳಿದರು.

ಉಪಾಧ್ಯಕ್ಷೆ ಸಿ.ಶಾಂತಮ್ಮ ರೇವಣಸಿದ್ದಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷೆ ತಿಪ್ಪಮ್ಮ ಇದ್ದರು.

11 ಗ್ರಾಮಗಳಲ್ಲಿ ನೀರಿನ ಅಭಾವ: ತಾಲೂಕಿನ 11 ಗ್ರಾಮಗಳಲ್ಲಿ ಕುಡಿವ ನೀರಿನ ಅಭಾವ ಎದುರಾಗಿದೆ ಎಂದು ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ದಯಾನಂದ ಸ್ವಾಮಿ ಹೇಳಿದರು. ಕಡ್ಲೆಗುದ್ದು, ಸೊಂಡೆಕೊಳ, ಹಲಗಪ್ಪನಹಟ್ಟಿ, ಕೋಗುಂಡೆ ಗ್ರಾಮದಲ್ಲೂ ನೀರಿನ ತೊಂದರೆ ಇದೆ. ಅರಣ್ಯದಲ್ಲಿ ಕೊಳವೆ ಬಾವಿ ಕೊರೆಸಿ ಸೊಂಡೇಕೊಳ, ಹಲಗಪ್ಪನ ಹಟ್ಟಿ ಮತ್ತಿತರ ಗ್ರಾಮಗಳಿಗೆ ನೀರು ಕೊಡಿ ಎಂದು ಇಒ ಹಾಗೂ ಅಧ್ಯಕ್ಷರು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net