

ಚಿತ್ರದುರ್ಗ: ಸಾರ್ವಜನಿಕರು ಕಣ್ಣಿನ ಆರೋಗ್ಯದ ಬಗ್ಗೆ ಕಾಳಜಿ ತೋರಬೇಕು. 40 ವರ್ಷ ವಯಸ್ಸು ಮೀರಿದವರು ಗ್ಲಾಕೋಮಾ ರೋಗ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯವಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.
ನಗರದ ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಕಣ್ಣಿನ ಆರೈಕೆ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.
ಭಾರತದಲ್ಲಿ ಹೆಣ್ಣಿಗೆ ಉನ್ನತ ಹಾಗೂ ಗೌರವದ ಸ್ಥಾನವನ್ನು ನೀಡಲಾಗಿದೆ. ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲೂ ಸಮಾನತೆ ಹಾಗೂ ಸಾರ್ವಭೌಮತ್ವ ನೀಡಬೇಕೆಂಬುದು ಬರೀ ಮಾತಾಗದೇ, ಕೃತಿಯಲ್ಲೂ ಇರಬೇಕು ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಮಾ.8ರಿಂದ 14ರ ವರೆಗೆ ತಾಲೂಕಿನಲ್ಲಿ ವಿಶ್ವ ಗ್ಲಾಕೋಮಾ ಸಪ್ತಾಹವನ್ನು ಆಚರಿಸುವ ಮೂಲಕ ಸಾರ್ವಜನಿಕರಿಗೆ ಕಣ್ಣಿನ ಆರೈಕೆಯ ಬಗ್ಗೆ ಜಾಗೃತಿ ಮೂಡಿಸಲಾಗುವುದು. 40 ವರ್ಷ ವಯಸ್ಸಿನ ನಂತರ ಪ್ರತಿಯೊಬ್ಬರು ವರ್ಷಕ್ಕೊಮ್ಮೆ ಕಣ್ಣಿನ ಒತ್ತಡ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಜಾನಕಿ, ಶಭಾನ, ನಾಗವೇಣಿ, ಪರ್ವೀನ್, ಡಾ.ಸುಪ್ರಿತಾ, ಡಾ.ವಾಣಿ, ನಗ್ಮಾ, ನಂದಿನಿ,ಪೂಜಾ, ರೇಖಾ, ಮಾರುತಿ ಪ್ರಸಾದ್, ಅಲಿ, ಹಬೀಬ್ ಅನ್ಸಾರ್, ಮಂಜುನಾಥ, ನಾಗೇಂದ್ರಪ್ಪ ಮತ್ತಿತರರು ಇದ್ದರು.
ನಿರ್ಲಕ್ಷಿೃಸಿದರೆ ಅಂಧತ್ವ ಶಾಶ್ವತ: ಅದೃಶ್ಯ ಗ್ಲಾಕೋಮಾದ ಬಗ್ಗೆ ಎಚ್ಚರಿಕೆ ವಹಿಸಬೇಕು. ಯಾವುದೇ ರೋಗ ಲಕ್ಷಣಗಳಿಲ್ಲದೆ ದೃಷ್ಟಿ ಕದಿಯುವ ಕಾಯಿಲೆ ಇದು. ನೇರ ದೃಷ್ಟಿ ಸರಿ ಇದ್ದರೂ ಅದರ ವಲಯ ಕುಗ್ಗುತ್ತದೆ. ಮಧುಮೇಹ, ರಕ್ತದೊತ್ತಡ ಹಾಗೂ ಸಮೀಪ ದೃಷ್ಟಿ ದೋಷ ಇರುವವರು ಗ್ಲಾಕೋಮಾಕ್ಕೆ ತುತ್ತಾಗುವ ಸಂಭವ ಹೆಚ್ಚಿದ್ದು, ಸೂಕ್ತ ಚಿಕಿತ್ಸೆ ಪಡೆಯದಿದ್ದಲ್ಲಿ ಶಾಶ್ವತ ಅಂಧತ್ವ ಉಂಟಾಗುತ್ತದೆ ಎಂದು ಎನ್.ಎಸ್.ಮಂಜುನಾಥ ಎಚ್ಚರಿಸಿದರು.