ಮೆಕ್ಕೆಜೋಳ ಬೆಳೆಗಾರರಿಗೆ ಶೀಘ್ರ ಪರಿಹಾರ

MEKKEJOLA (2)
Published on

ಚಿತ್ರದುರ್ಗ: ಲಾಕ್‌ಡೌನ್‌ನಿಂದ ನಷ್ಟ ಅನುಭವಿಸಿರುವ ಮೆಕ್ಕೆಜೋಳ ಬೆಳೆಗಾರರಿಗೆ ತಲಾ 5 ಸಾವಿರ ರೂ. ಪರಿಹಾರ ಬಿಡುಗಡೆಗೆ ಕೃಷಿ ಇಲಾಖೆ ಸಜ್ಜಾಗಿದೆ.

ಜಿಲ್ಲಾದ್ಯಂತ ಮುಂಗಾರು ಬೆಳೆ ಸಮೀಕ್ಷೆಯಂತೆ 98,605 ಹಾಗೂ ಹಿಂಗಾರಿನಲ್ಲಿ 44,226 ಪ್ಲಾಟ್‌ಗಳಿದ್ದು, ಮೊದಲ ಹಂತದಲ್ಲಿ ಪರಿಹಾರ ವಿತರಿಸಲು 47,009 ರೈತರನ್ನು ಗುರುತಿಸಲಾಗಿದೆ.

ಸರ್ವೆ ನಂಬರ್ ಸರಿ ಇರುವ ಹಾಗೂ ಬೆಳೆ ಸಮೀಕ್ಷೆ ಪಟ್ಟಿಯಲ್ಲಿ ಇರುವವರ ಹೆಸರನ್ನು ರೈತ ಸಂಪರ್ಕ ಕೇಂದ್ರ ಹಾಗೂ ಗ್ರಾಪಂಗಳಲ್ಲಿ ಪ್ರಕಟಿಸಲಾಗಿದೆ. ಪಟ್ಟಿಯಲ್ಲಿ ಹೆಸರಿಲ್ಲದವರು ಪರಿಹಾರಕ್ಕಾಗಿ ಅರ್ಜಿಗಳನ್ನು ಹಾಗೂ ಪಟ್ಟಿಯಲ್ಲಿ ಏನಾದರೂ ಆಕ್ಷೇಪಗಳಿದ್ದರೆ ಸಲ್ಲಿಸಲು ಕೃಷಿ ಇಲಾಖೆ ಜೂ.27 ರವರೆಗೆ ಅವಕಾಶ ಕೊಟ್ಟಿದೆ. ಸರ್ವೆ ನಂಬರ್ ಸರಿ ಇರುವ ರೈತರ ಬ್ಯಾಂಕ್ ಖಾತೆಗಳಿಗೆ ಶೀಘ್ರವೇ ಪರಿಹಾರ ಮೊತ್ತ ನೇರ ಜಮಾ ಆಗಲಿದೆ.

ಈ ವರ್ಷ 87 ಸಾವಿರ ಹೆ.ಮೆಕ್ಕೆಜೋಳ ಗುರಿ: ಜಿಲ್ಲಾದ್ಯಂತ 3.80 ಲಕ್ಷ ಹೆ.ಬಿತ್ತನೆ ಗುರಿ ಇದೆ. ಇದರಲ್ಲಿ 1.42 ಲಕ್ಷ ಹೆ.ಶೇಂಗಾ, 87 ಸಾವಿರ ಹೆ.ಮೆಕ್ಕೆಜೋಳ, 49 ಸಾವಿರ ಹೆ.ರಾಗಿ, 23 ಸಾವಿರ ಹೆ.ತೊಗರಿ ಇತ್ಯಾದಿ ಬೆಳೆ ನಿರೀಕ್ಷಿಸಲಾಗಿದೆ. ಪ್ರಸ್ತುತ 15 ಸಾವಿರ ಹೆ.ನಲ್ಲಿ ಮೆಕ್ಕೆಜೋಳದ ಬಿತ್ತನೆಯಾಗಿದೆ. ಹೊಸದುರ್ಗ, ಹೊಳಲ್ಕೆರೆ, ಚಿತ್ರದುರ್ಗ ತಾಲೂಕುಗಳಲ್ಲಿ ಮೆಕ್ಕೆಜೋಳ ಅಧಿಕ ಬಿತ್ತನೆ ಆಗಲಿದೆ.

ಲದ್ದಿ ಹುಳು: ಚಿತ್ರದುರ್ಗ ತಾಲೂಕು ಭರಮಸಾಗರ ಹೋಬಳಿ ಹಾಗೂ ಹೊಳಲ್ಕೆರೆ ತಾಲೂಕಿನ ಕೆಲವು ಭಾಗಗಳಲ್ಲಿ ಮೆಕ್ಕೆಜೋಳಕ್ಕೆ ಲದ್ದಿಹುಳುವಿನ ಬಾಧೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ರಚಿಸಿರುವ ಕೀಟಶಾಸ್ತ್ರ ಅಧಿಕಾರಿಗಳ ತಂಡಗಳು, ತಾಕುಗಳಿಗೆ ಭೇಟಿ ನೀಡಿ ಹ ತೋಟಿ ಕ್ರಮಗಳ ಕುರಿತಂತೆ ರೈತರಿಗೆ ಸಲಹೆ ನೀಡುತ್ತಿವೆ. ಮೆಕ್ಕೆಜೋಳ ಬೆಳೆಯುವ ಪ್ರದೇಶದಲ್ಲಿ ಸಾಧ್ಯವಾದಷ್ಟು ಏಕಕಾಲಕ್ಕೆ ಬಿತ್ತನೆ ಸೇರಿದಂತೆ ತಜ್ಞರ ಸಲಹೆಯೊಂದಿಗೆ ಕೀಟ ಹತೋಟಿ ಸಾಧ್ಯವಿದೆ ಎಂದು ಕೃಷಿ ಇಲಾಖೆ ರೈತರಿಗೆ ಸಲಹೆ ನೀಡಿದೆ.

ಮೊಳಕಾಲ್ಮೂರು-781

ಹಿರಿಯೂರು-1024

ಚಳ್ಳಕೆರೆ-2488

ಹೊಸದುರ್ಗ-2590

ಚಿತ್ರದುರ್ಗ-19307

ಹೊಳಲ್ಕೆರೆ-18760

ತಾಲೂಕು-ಫಲಾನುಭವಿ ಸಂಖ್ಯೆ

ಪರಿಹಾರಕ್ಕಾಗಿ ಸದ್ಯಕ್ಕೆ ಗುರುತಿಸಿರುವುದು

ಮೊದಲ ಹಂತದಲ್ಲಿ ಪರಿಹಾರ ವಿತರಣೆಗೆ 47,009 ಫಲಾನುಭವಿಗಳನ್ನು ಗುರುತಿಸಲಾಗಿದೆ. 2ನೇ ಹಂತದಲ್ಲಿ ಜಂಟಿ ಖಾತೆ ಇರುವಂಥವರ ಪೈಕಿ ಒಬ್ಬರ ಹೆಸರಿಗೆ ಪರಿಹಾರ ಬಿಡುಗಡೆ ಮಾಡಲಾಗುವುದು. 3ನೇ ಹಂತದಲ್ಲಿ ಪೌತಿ ಖಾತೆ ಹಾಗೂ ಮುಂಗಾರು, ಹಿಂಗಾರು ಬೆಳೆ ಸಮೀಕ್ಷೆಯಲ್ಲಿ ಹೆಸರು ನೋಂದಣಿಯಾಗದೇ ಇರುವ ಬೆಳೆಗಾರರು ಸಲ್ಲಿಸುವ ಅರ್ಜಿಗಳನ್ನು ಪರಿಶೀಲಿಸಿ ಪರಿಹಾರ ಕೊಡಲಾಗುತ್ತದೆ.
ಡಾ.ಸದಾಶಿವ, ಜಂಟಿ ನಿರ್ದೇಶಕ, ಕೃಷಿ ಇಲಾಖೆ,ಚಿತ್ರದುರ್ಗ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net