

ಚಿತ್ರದುರ್ಗ: ಕರೊನಾ ಸೋಂಕು ತಡೆ ನಿಟ್ಟಿನಲ್ಲಿ ನಗರಸಭೆ ನಗರದ ಸೈನ್ಸ್ ಕಾಲೇಜು ಮೈದಾನದಲ್ಲಿ ನಿರ್ಮಿಸಿರುವ 87 ಸಾವಿರ ರೂ. ವೆಚ್ಚದ ಸೋಂಕು ನಿವಾರಕ ಮಾರ್ಗಕ್ಕೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಶನಿವಾರ ಚಾಲನೆ ನೀಡಿದರು.
ಜನದಟ್ಟಣೆ ಇರುವಂಥ ನಗರದ ಇನ್ನು ಕೆಲವೆಡೆ ಈ ಸವಲತ್ತು ಸ್ಥಾಪಿಸುವಂತೆ ನಗರಸಭೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲೂ ಸೋಮವಾರದಿಂದ ಆರಂಭಿಸುವುದಾಗಿ ನಗರಸಭೆ ಆಯುಕ್ತ ಜಿ.ಟಿ.ಹನುಮಂತರಾಜು ಹೇಳಿದರು.
ಲಾಕ್‌ಡೌನ್‌ನಿಂದಾಗಿ ಈ ಮೈದಾನದಲ್ಲಿ ಸಗಟು ತರಕಾರಿ ವ್ಯಾಪಾರಕ್ಕೆ ಜಿಲ್ಲಾಡಳಿತ ಅನುಕೂಲ ಮಾಡಿಕೊಟ್ಟಿದೆ.
ಸರ್ಜಿಕಲ್ ಸ್ಟೈನ್‌ಲೆಸ್ ಸ್ಟೀಲ್ ಬಳಸಿ ನಿರ್ಮಿಸಿರುವ ಈ ಮಾರ್ಗವೂ 10 ಅಡಿ ಉದ್ದ, 5 ಅಡಿ ಅಗಲ ಹಾಗೂ 10 ಅಡಿ ಎತ್ತರವಿದೆ. ಮಾರುಕಟ್ಟೆಗೆ ಪ್ರವೇಶಿಸುವ ಪ್ರತಿಯೊಬ್ಬರ ಮೇಲೆ ಸೋಡಿಯಂ ಹೈಪೊಕ್ಲೋರೈಡ್ ದ್ರಾವಣ ಸಿಂಪಡಣೆ ಆಗಲಿದೆ.
ಪ್ರವೇಶದ ವೇಳೆ ಪ್ರತಿಯೊಬ್ಬರು ಕೈಗಳನ್ನು ಮೇಲೆತ್ತಿಕೊಂಡು ಸಾಗಬೇಕು. ಬೆಳಗ್ಗೆ 3ರಿಂದ 8ರ ವರೆಗೆ ಈ ಮಾರ್ಗದಲ್ಲಿ ದ್ರಾವಣ ಸಿಂಪಡಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಪ್ರಕಾಶ್, ಡಿಸಿ ಆರ್.ವಿನೋತ್ ಪ್ರಿಯಾ, ಎಸ್ಪಿ ಜಿ.ರಾಧಿಕಾ, ಎಎಸ್ಪಿ ಎಂ.ನಂದಗಾವಿ, ಜಿಪಂ ಸಿಇಒ ಎಸ್.ಹೊನ್ನಾಂಬ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ರಾಜಶೇಖರ್, ತಹಸೀಲ್ದಾರ್ ಜೆ.ಸಿ.ವೆಂಕಟೇಶಯ್ಯ, ಡಿಎಚ್‌ಒ ಡಾ.ಸಿ.ಎಲ್.ಪಾಲಾಕ್ಷ, ಡಿಎಸ್ ಡಾ.ಎಚ್.ಜೆ.ಬಸವರಾಜಪ್ಪ, ಡಾ.ಜಿ.ಟಿ.ಸಿದ್ದಾರ್ಥ, ನಗರಸಭೆ ಇಂಜಿನಿಯರ್‌ಗಳಾದ ಮನೋಹರ್, ಕಿರಣ್, ಜಾಫರ್ ಮತ್ತಿತರರು ಇದ್ದರು.