

ಚಿತ್ರದುರ್ಗ: ಜಿಲ್ಲಾ ಸರ್ವೇಕ್ಷಣಾ ಘಟಕ ನಗರದ ಡಿಎಚ್‌ಒ ಕಚೇರಿಯಲ್ಲಿ ಮಂಗಳವಾರ ಕರೊನಾ ವೈರಸ್ ಕುರಿತಂತೆ ಚಿತ್ರದುರ್ಗ ತಾಲೂಕಿನ ಸಿಬ್ಬಂದಿಗೆ ಅರಿವು ಕಾರ್ಯಾಗಾರ ಏರ್ಪಡಿಸಿತ್ತು.
ಇದರಲ್ಲಿ ಭಾಗವಹಿಸಿದ್ದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್.ಪಾಲಾಕ್ಷ ಮಾತನಾಡಿ, ಕ್ಷೇತ್ರಮಟ್ಟದಲ್ಲಿ ಜನ ಕರೊನಾ ಕುರಿತು ಪ್ರಶ್ನಿಸುವುದರಿಂದ ಸಿಬ್ಬಂದಿಗೆ ಈ ಬಗ್ಗೆ ಅರಿವು ಇರಬೇಕೆಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ತುಳಸಿ ರಂಗನಾಥ ಮಾತನಾಡಿ, ರೋಗ ಹತೋಟಿಗೆ ತರಲು ಕೆಮ್ಮು ಮತ್ತು ಸೀನುವಾಗ ಬಾಯಿಗೆ ಕರವಸ್ತ್ರ ಅಡ್ಡ ಹಿಡಿಯಬೇಕು. ಕೈಗಳನ್ನು ಆಗಾಗ ಸೋಪಿನಿಂದ ತೊಳೆದುಕೊಳ್ಳುವ ಮೂಲಕ ಸರಳ ನೈರ್ಮಲ್ಯ ಅಭ್ಯಾಸ ಮಾಡಬೇಕು. ಕೆಮ್ಮು, ನೆಗಡಿ ಶೀತವಿರುವಾಗ ಜಾತ್ರೆ, ಮದುವೆ, ಸಮಾರಂಭದಲ್ಲಿ ಭಾಗವಹಿಸದಿರುವುದು ಉತ್ತಮ. ನಮ್ಮ ದೇಶ ಉಷ್ಣ ವಲಯದಲ್ಲಿ ಇರುವುದರಿಂದ ಕರೊನಾ ವೈರಸ್ ಹೆಚ್ಚು ಕಾಲ ಉಳಿಯದೆಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ, ಮೂಗಪ್ಪ, ಜಾನಕಿ, ಜಿಲ್ಲಾ ಮೇಲ್ವಿಚಾರಕರಾದ ಖಾಸಿಂಸಾಬ್, ಹನುಮಂತಪ್ಪ, ಗಂಗಾಧರ್, ಶ್ರೀನಿವಾಸ್, ಪುನೀತ್, ಟಿ.ಜಿ.ರಂಗನಾಥ್ ರೆಡ್ಡಿ, ಚಿತ್ರದುರ್ಗ ತಾಲೂಕಿನ ಹಿರಿಯ ಕಿರಿಯ ಆರೋಗ್ಯ ಸಹಾಯಕರು ಇದ್ದರು.