ಹಣಕ್ಕಿಲ್ಲ ಕೊರತೆ, ಉಪಕರಣಕ್ಕಿಲ್ಲ ದುರಸ್ತಿ ಭಾಗ್ಯ

CT SCAN
Published on

ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ: ಜಿಲ್ಲಾಸ್ಪತ್ರೆಗೆ ಸಿಟಿ ಸ್ಕಾೃನರ್ ಸೇರಿ ಅನೇಕ ಸೌಲಭ್ಯಗಳನ್ನು ಕೋಟ್ಯಂತರ ರೂ. ವೆಚ್ಚದಲ್ಲಿ ಕಲ್ಪಿಸಲಾಗಿದೆ. ಆದರೆ, ಕೆಟ್ಟು ನಿಂತಿರುವ ಇವುಗಳಿಗೆ ದುರಸ್ತಿ ಭಾಗ್ಯ ಮಾತ್ರ ದೊರೆತಿಲ್ಲ.

ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಉಪಕರಣಗಳ ಸಮಗ್ರ ನಿರ್ವಹಣೆಗಾಗಿ (ಸಿಎಂಸಿ) ಖಾಸಗಿ ಸಂಸ್ಥೆಯೊಂದಿಗೆ ಆರೋಗ್ಯ ಇಲಾಖೆ ಒಪ್ಪಂದ ಮಾಡಿಕೊಂದೆ.

ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಆ್ಯಂಡ್ ವೇರ್ ಹೌಸಿಂಗ್ ಸೊಸೈಟಿ ಮೂಲಕ ಮೊದಲ ಕಂತಿನಲ್ಲಿ 8 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ, ಈ ಖಾಸಗಿ ಸಂಸ್ಥೆಯಿಂದ ಅನುದಾನ ಬಿಡುಗಡೆ ಆಗದೇ ಉಪಕರಣಗಳ ದುರಸ್ತಿ ಆಗುತ್ತಿಲ್ಲ.

ಇದಕ್ಕೆ ಉದಾಹರಣೆ ಎಂಬಂತೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಕಳೆದ ನವೆಂಬರ್ 29ರಂದು ಕೆಟ್ಟಿರುವ ಸಿಟಿ ಸ್ಕಾೃನರ್ ದುರಸ್ತಿಗೆ ಇನ್ನು ಕಾಲ ಕೂಡಿ ಬಂದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರೂ ಆದ ಆರೋಗ್ಯ ಸಚಿವ ಬಿ.ಶ್ರೀರಾಮುಲು, ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ್ದ ವೇಳೆ, ನಾಗರಿಕರ ಮನವಿಗೆ ಸ್ಪಂದಿಸಿ ದುರಸ್ತಿಗೆ ತಕ್ಷಣ ಅನುದಾನ ಕೊಡುವುದಾಗಿ ಹೇಳಿದ್ದರು. ಆದರೆ, ಅವರು ಕೊಟ್ಟಿದ್ದ ಭರವಸೆಯಂತೆ ಒಂದು ತಿಂಗಳಾದರೂ ಸಿಟಿ ಸ್ಕಾೃನರ್ ದುರಸ್ತಿಯಾಗಿಲ್ಲ.

ಈ ಹಿಂದೆ ಜಿಲ್ಲೆಗೆ ಭೇಟಿ ಕೊಟ್ಟಿದ್ದ ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ, ಚಿತ್ರದುರ್ಗ ಆಸ್ಪತ್ರೆ ಸಹಿತ ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿರುವ ಉಪಕರಣಗಳ ನಿರ್ವಹಣೆ-ದುರಸ್ತಿಗಾಗಿ ಖಾಸಗಿ ಕಂಪನಿಯೊಂದಿಗೆ ಇಲಾಖೆ ಒಪ್ಪಂದ ಮಾಡಿಕೊಳ್ಳುತ್ತಿದೆ ಎಂದಿದ್ದರು. ಇದೀಗ ಒಪ್ಪಂದವಾಗಿ ಮೊದಲ ಹಂತದಲ್ಲಿ ಅನುದಾನವೂ ಬಿಡುಗಡೆ ಆಗಿದೆ.

ಉಪಕರಣಗಳ ನಿರ್ವಹಣೆ ಹೊಣೆ ಹೊತ್ತಿರುವ ಖಾಸಗಿ ಸಂಸ್ಥೆಯೊಂದು, ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಸಿಟಿ ಸ್ಕಾೃನರ್ ನಿರ್ವಹಣೆಗಾಗಿ ಮತ್ತೊಂದು ತಂತ್ರಜ್ಞ ಸಂಸ್ಥೆಯೊಂದಿಗೆ ಫೆ.12ರಂದು ಒಪ್ಪಂದ ಮಾಡಿಕೊಂಡಿದೆ. 81.42 ಲಕ್ಷ ರೂ. ಮೊತ್ತದಲ್ಲಿ 3 ವರ್ಷಗಳ (ಫೆ.17ರಿಂದ 2023 ಫೆ.16ರ ವರೆಗೆ) ಕಾಲ ಸಿಟಿ ಸ್ಕಾೃನರ್ ಸಮಗ್ರ ನಿರ್ವಹಣೆ (ಸಿಎಂಸಿ) ಒಪ್ಪಂದವಾಗಿದೆ.

ಕೋಟ್ಯಂತರ ರೂ. ವೆಚ್ಚದೊಂದಿಗೆ 2012ರಲ್ಲಿ ಅಳವಡಿಸಿದ್ದ ಸಿಟಿ ಸ್ಕಾೃನರ್ 2017ರ ವರೆಗೆ ಸರಿಯಾಗಿ ಬಳಕೆಯೇ ಆಗಿರಲಿಲ್ಲ. ಈಗ ಮತ್ತೆ ಕೆಟ್ಟಿರುವುದರಿಂದ ರೋಗಿಗಳು ಅನಿವಾರ್ಯವಾಗಿ ದುಬಾರಿ ಶುಲ್ಕವನ್ನು ವಿಧಿಸುವ ಖಾಸಗಿ ಲ್ಯಾಬ್‌ಗಳನ್ನು ಅವಲಂಬಿಸುವಂತಾಗಿದೆ.

ರಾಜ್ಯ ಮಟ್ಟದಲ್ಲಿ ಸರ್ಕಾರಿ ಆಸ್ಪತ್ರೆಗಳ ಉಪಕರಣಗಳ ಸಿಎಂಸಿ ಆಗಿರುವ ಒಪ್ಪಂದ, ಮಂಜೂರಾದ ಅನುದಾನ, ಕೆಎಸ್‌ಎಲ್‌ಡಬ್ಲುೃಎಸ್ ನಿಂದ ಖಾಸಗಿ ಸಂಸ್ಥೆಗೆ ಬಿಡುಗಡೆ ಆಗಿರುವ ಅನುದಾನ ವಿವರ ಕುರಿತಂತೆ ಪತ್ರಿಕೆಯ ಪ್ರಶ್ನೆಗೆ ಆಯುಕ್ತ ಪಂಕಜ್‌ಕುಮಾರ್‌ಪಾಂಡೆ ಪ್ರತಿಕ್ರಿಯೆ ನೀಡಿಲ್ಲ.

ಜಿಲ್ಲಾಸ್ಪತ್ರೆ ಡಿಎಸ್ ಡಾ.ಎಚ್.ಜೆ.ಬಸವರಾಜಪ್ಪ ಹೇಳಿಕೆ: ಸಿಟಿ ಸ್ಕಾೃನರ್ ನಿರ್ವಹಣೆ ನಿಟ್ಟಿನಲ್ಲಿ ಒಪ್ಪಂದವಾಗಿದ್ದು, ಇನ್ನೊಂದು ವಾರದೊಳಗೆ ದುರಸ್ತಿಯಾಗಲಿದೆ. ಆದರೆ, ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಆ್ಯಂಡ್ ವೇರ್ ಹೌಸಿಂಗ್ ಸೊಸೈಟಿ ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಉಪಕರಣಗಳ ಸಿಎಂಸಿಗೆ ಖಾಸಗಿ ಸಂಸ್ಥೆಯೊಂದಕ್ಕೆ ಮೊದಲ ಹಂತದಲ್ಲಿ 8 ಕೋಟಿ ರೂ. ಅನುದಾನ ಮಾಡಿದೆ ಎಂಬ ವಿಚಾರದ ಕುರಿತು ನನಗೇನೂ ಮಾಹಿತಿ ಇಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net