ಕಮಲ ತಂತ್ರಗಾರಿಕೆ ವಿರುದ್ಧ ಕೈಪಡೆ ಎಚ್ಚರಿಕೆ ನಡೆ

ZP OFFICE
Published on

ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ: 2021 ಮೇ 4ರಂದು ಅವಧಿ ಪೂರ್ಣಗೊಳ್ಳಲಿರುವ ಪ್ರಸ್ತುತ ಜಿಪಂದ ಅಧಿಕಾರವು ಕಾಂಗ್ರೆಸ್ಸಿನಲ್ಲೇ ಉಳಿಯುವ ಸಾಧ್ಯತೆ ಹೆಚ್ಚಾಗಿದೆ.

ಜಿ.ಎಂ.ವಿಶಾಲಾಕ್ಷಿ ನಟರಾಜ್ ರಾಜೀನಾಮೆಯಿಂದ ತೆರವಾಗಿರುವ ಅಧ್ಯಕ್ಷ ಸ್ಥಾನಕ್ಕೆ (ಸಾಮಾನ್ಯ ಮಹಿಳೆ) ಮೇ 22ರ ಬೆಳಗ್ಗೆ 11 ಗಂಟೆಗೆ ಚುನಾವಣೆ ನಡೆಯಲಿದೆ.

ಅಗತ್ಯ ಸದಸ್ಯ ಬಲವಿರುವ ಕಾಂಗ್ರೆಸ್ ತನ್ನ ಅಭ್ಯರ್ಥಿ, ಹಿರಿಯೂರು ತಾಲೂಕು ಮಸ್ಕಲ್ ಕ್ಷೇತ್ರದ ಶಶಿಕಲಾ ಸುರೇಶ್‌ಬಾಬು ಅವರನ್ನು ಗೆಲ್ಲಿಸುವ ವಿಶ್ವಾಸವನ್ನು ಹೊಂದಿದೆ.

ಆದರೆ, ಕೇಂದ್ರ-ರಾಜ್ಯದಲ್ಲಿ ಅಧಿಕಾರದಲ್ಲಿರುವ ಹಾಗೂ ಜಿಲ್ಲೆಯಲ್ಲಿ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ಐವರು ಶಾಸಕರನ್ನು ಹೊಂದಿರುವ ಬಿಜೆಪಿ ರಾಜಕೀಯ ತಂತ್ರಗಾರಿಕೆ ಹೇಗೊ, ಏನೋ ಎಂಬ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಎಚ್ಚರಿಕೆ ಹೆಜ್ಜೆಗಳನ್ನು ಇಟ್ಟಿದೆ.

ಮಾಜಿ ಸಚಿವ ಎಚ್.ಎಂ.ರೇವಣ್ಣ ನೇತೃತ್ವದಲ್ಲಿ ಸದಸ್ಯರ ಹಾಗೂ ಪಕ್ಷದ ಪ್ರಮುಖರ ಸಭೆ ನಡೆದಿದೆ. ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಪಕ್ಷದ 22 ಸದಸ್ಯರಿಗೆ ಈಗಾಗಲೇ ವಿಪ್ ಜಾರಿ ಮಾಡಿದ್ದಾರೆ. 10 ಸದಸ್ಯರ ಗೆಲುವಿನೊಂದಿಗೆ ಅಧಿಕಾರ ಹಿಡಿಯಲು ವಿಫಲವಾಗಿದ್ದ ಬಿಜೆಪಿ, ಈ ಬಾರಿ ಸಮಾನ ಮನಸ್ಕ ಅನ್ಯ ಪಕ್ಷಗಳ ಸದಸ್ಯರ ಸಹಕಾರ ಪಡೆಯುವ ವಿಶ್ವಾಸದೊಂದಿಗೆ ಗದ್ದುಗೆಗೆ ಗಾಳ ಹಾಕುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಬಿಜೆಪಿಯ ಈ ಲೆಕ್ಕಾಚಾರ ಕೈಗೂಡುವುದೇ? ಕೋವಿಡ್ ಕಾರಣದಿಂದಾಗಿ ಚುನಾವಣೆ ಮುಂದೂಡ ಬೇಕೆಂದು ಬಯಸಿದ್ದ ಬಿಜೆಪಿ, ಈಗ ಕಣಕ್ಕೆ ಇಳಿಯಲಿದೆಯೇ? ಪಕ್ಷಕ್ಕೆ ಮ್ಯಾಜಿಕ್ ನಂ.19 ದೊರೆಯಲಿದೆಯೇ ಎಂಬ ಪ್ರಶ್ನೆಗಳಿಗೆ ಇನ್ನು ಕೆಲ ಹೊತ್ತಿನಲ್ಲಿ ಉತ್ತರ ಸಿಗಲಿದೆ.

ಜಿಪಂ ಸದಸ್ಯರಿಗೆ ಕೋವಿಡ್ ಟೆಸ್ಟ್: ಬೆಂಗಳೂರು ಪ್ರಾದೇಶಿಕ ಆಯುಕ್ತ ವಿ.ಪಿ.ಇಕ್ಕೇರಿ ಅಧ್ಯಕ್ಷತೆಯಲ್ಲಿ ಚುನಾವಣೆ ನಡೆಯಲಿದೆ. ಬೆಳಗ್ಗೆ 8ರಿಂದ 9ರ ವರೆಗೆ ನಾಮಪತ್ರ ಸಲ್ಲಿಕೆ, ನಂತರ ಪರಿಶೀಲನೆ, ಹಿಂತೆಗೆಯುವ ಅವಧಿ ಬಳಿಕ ಅಗತ್ಯಬಿದ್ದಲ್ಲಿ ಬೆಳಗ್ಗೆ 11ಕ್ಕೆ ಚುನಾವಣೆ ನಡೆಯಲಿದೆ. ಇದಕ್ಕಾಗಿ ಜಿಪಂ ಅಂಗಳದಲ್ಲಿ ಸಕಲ ಸಿದ್ಧತೆ ಸಿದ್ಧತೆ ನಡೆದಿದೆ. ಸಾಮಾಜಿಕ ಅಂತರಕ್ಕೆ ತಕ್ಕಂತೆ 37 ಸದಸ್ಯರು ಹಾಗೂ ಚುನಾವಣೆಯಲ್ಲಿ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅಧಿಕಾರಿ, ಸಿಬ್ಬಂದಿಗೆ ಆಸನ ಕಲ್ಪಿಸಲಾಗುತ್ತದೆ. ಎಲ್ಲ ಸದಸ್ಯರು ಕೋವಿಡ್-19 ಪರೀಕ್ಷೆಗೆ ಸೂಚಿಸಲಾಗಿದ್ದು, ಈ ಪೈಕಿ ಇನ್ನು ಏಳು ಜನರ ಗಂಟಲು ದ್ರವದ ಪರೀಕ್ಷೆ ಮಾಡಿಸಿಕೊಳ್ಳಬೇಕಿದೆ ಎಂದು ಜಿಪಂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಕ್ಷಗಳ ಬಲಾಬಲ
ಕಾಂಗ್ರೆಸ್-22
ಬಿಜೆಪಿ-10
ಜೆಡಿಎಸ್-2
ಪಕ್ಷೇತರ-2
ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ-1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net