ಗ್ರಂಥಾಲಯಗಳಲ್ಲಿ ಶೌಚಗೃಹ ವ್ಯವಸ್ಥೆಗೆ ಸೂಚನೆ

DC VINOD PRIYA.1
Published on

ಚಿತ್ರದುರ್ಗ: ಜಿಲ್ಲೆಯ ಎಲ್ಲ ಗ್ರಂಥಾಲಯಗಳಲ್ಲಿ ಕಡ್ಡಾಯವಾಗಿ ಶೌಚಗೃಹಗಳ ಸಹಿತ ಅಗತ್ಯ ಮೂಲ ಸೌಕರ್ಯಗಳನ್ನು ಓದುಗರಿಗೆ ಕಲ್ಪಿಸಬೇಕೆಂದು ಡಿಸಿ ಆರ್.ವಿನೋತ್ ಪ್ರಿಯಾ ಮುಖ್ಯಗ್ರಂಥಾಲಯಾಧಿಕಾರಿಗೆ ಸೂಚಿಸಿದರು.

ಡಿಸಿ ಕಚೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ಕೇಂದ್ರ ಗ್ರಂಥಾಲಯ ಪ್ರಾಧಿಕಾರದ 2020-21ನೇ ಸಾಲಿನ ಅಂದಾಜು ಆಯವ್ಯಯ ಕುರಿತ ಸಭೆಯಲ್ಲಿ ಮಾತನಾಡಿ, ಅಗತ್ಯ ಮೂಲ ಸೌಕರ್ಯಗಳೊಂದಿಗೆ ಓದುಗರ ಅಭಿರುಚಿಗೆ ಅನುಗುಣವಾಗಿ ಸ್ಪರ್ಧಾತ್ಮಕ ಪುಸ್ತಕಗಳೂ ಇರಬೇಕೆಂದರು.

ಪ್ರಸಕ್ತ ವರ್ಷ ಪ್ರಾಧಿಕಾರಕ್ಕೆ 80.80 ಲಕ್ಷ ರೂ.ಅಂದಾಜು ಆದಾಯ ಹಾಗೂ 54.80 ಲಕ್ಷ ರೂ.ವೆಚ್ಚವನ್ನು ನಿರೀಕ್ಷಿಸಲಾಗಿದೆ ಎಂದು ಮುಖ್ಯಗ್ರಂಥಾಲಯಾಧಿಕಾರಿ ತಿಪ್ಪೇಸ್ವಾಮಿ ಹೇಳಿದರು. ಕರೊನಾ ಹಿನ್ನೆಲೆಯಲ್ಲಿ ಇ-ಸಾರ್ವಜನಿಕ ಗ್ರಂಥಾಲಯ ಮೊಬೈಲ್ ಆ್ಯಪ್ ಆರಂಭಿಸಲಾಗಿದೆ.

ಜೂ.21 ರವರೆಗೆ 4537 ಓದುಗರು ಇ-ಸಾರ್ವಜನಿಕ ಗ್ರಂಥಾಲಯದ ಸೌಲಭ್ಯ ಪಡೆದಿದ್ದಾರೆ. ಜಿಲ್ಲೆಯ 198 ಗ್ರಾಪಂ ಗ್ರಂಥಾಲಯ ಗಳ ಸದಸ್ಯತ್ವ ಠೇವಣಿ ಹಣ 1.95 ಲಕ್ಷ ರೂ. ಗಳನ್ನು ಗ್ರಾಮ ಪಂಚಾಯಿತಿಗಳಿಗೆ ಮರು ಪಾವತಿಸಲಾಗಿದೆ ಎಂದರು.

ಪ್ರಾಧಿಕಾರದ ಉಪಾಧ್ಯಕ್ಷ ಡಾ.ಬಿ.ರಾಜಶೇಖರಪ್ಪ, ಜಿಪಂ ಮಾಜಿ ಅಧ್ಯಕ್ಷೆ ಜಿ.ಎಂ.ವಿಶಾಲಾಕ್ಷಿ ನಟರಾಜ್, ಹೊಳಲ್ಕೆರೆ ಪಪಂ ಸದಸ್ಯ ಮುರುಗೇಶ್, ಚಳ್ಳಕೆರೆ ತಾಪಂ ಸದಸ್ಯ ಎಚ್.ಆಂಜನೇಯ, ನಿವೃತ್ತ ಪ್ರಾಂಶುಪಾಲ ಎಚ್.ಲಿಂಗಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net