

ಚಿತ್ರದುರ್ಗ: ಜಿಲ್ಲೆಯ ವಿವಿಧೆಡೆ ಗುರುವಾರ ಭಗೀರಥ ಮಹರ್ಷಿ ಜಯಂತ್ಯುತ್ಸವವನ್ನು ಸರಳವಾಗಿ ಆಚರಿಸಲಾಯಿತು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಮಹರ್ಷಿ ಭಾವಚಿತ್ರಕ್ಕೆ ಎಡಿಸಿ ಸಂಗಪ್ಪ ಪುಷ್ಪ ನಮನ ಸಲ್ಲಿಸಿದರು.
ಬಳಿಕ ಮಾತನಾಡಿ, ಘೋರ ತಪಸ್ಸಿನ ಮೂಲಕ ಗಂಗೆಯನ್ನು ಭೂಮಿಗೆ ತಂದ ಭಗೀರಥ ಮಹರ್ಷಿಗಳ ಸತತ ಪ್ರಯತ್ನ, ಛಲ, ಏಕಾಗ್ರತೆ ಯುವ ಪೀಳಿಗೆಗೆ ಸ್ಫೂರ್ತಿ ಆಗಬೇಕು ಎಂದು ಕಿವಿಮಾತು ಹೇಳಿದರು.
ತನ್ನ ಪೂರ್ವಜರಿಗೆ ಮೋಕ್ಷ ನೀಡುವ ಉದ್ದೇಶದಿಂದ, ತಾಯಿಯ ಮಾತಿನಂತೆ, ಗಂಗೆಯನ್ನು ಭೂಮಿಗೆ ತರಲು ತಪಸ್ಸು ಕೈಗೊಂಡ ಮಹಾನ್ ಪುರುಷರನನ್ನು ನಾವಿಂದು ಸ್ಮರಿಸುವ ಜತೆಗೆ ಮಹರ್ಷಿಯ ಆದರ್ಶ, ಛಲವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ತುರ್ತು ಇದೆ ಎಂದರು.
ಉಪ್ಪಾರ ಸಮಾಜದ ಜಿಲ್ಲಾಧ್ಯಕ್ಷ ಆರ್.ಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ನಿಜಲಿಂಗಪ್ಪ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವೈಶಾಲಿ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ರೇಖಾ, ರಂಗಕರ್ಮಿ ಕೆ.ಪಿ.ಗಣೇಶಯ್ಯ, ನಿವೃತ್ತ ಡಿವೈಎಸ್ಪಿ ಎಸ್.ನಾಗರಾಜ್ ಮತ್ತಿತರು ಇದ್ದರು.