ಯಾರಿಗೆ ಕೋಟೆನಾಡಿನ ಉಸ್ತುವಾರಿ ಭಾಗ್ಯ?

DJ HYR
Published on

ಖಂಡೇನಹಳ್ಳಿ ಬಸವರಾಜ್ ಹಿರಿಯೂರು
ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರ ಅದೃಷ್ಟ ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಜನರಲ್ಲಿ ಮೂಡಿದೆ.
ಈ ಹಿಂದೆ ಎಸ್ಸಿ ಮೀಸಲು ಕ್ಷೇತ್ರವಾಗಿದ್ದ ಹಿರಿಯೂರಲ್ಲಿ ಗೆದ್ದವರಿಗೆ ಮಂತ್ರಿ ಜತೆಗೆ ಜಿಲ್ಲಾ ಉಸ್ತುವಾರಿ ಭಾಗ್ಯ ಖಚಿತ ಎಂಬ ವಾತಾವರಣ ದಶಕಗಳ ಕಾಲ ಇತ್ತು.

ದಿ॥ಕೆ.ಎಚ್.ರಂಗನಾಥ್, ದಿ॥ಡಿ.ಮಂಜುನಾಥ್ ಪ್ರತಿ ಸರ್ಕಾರದಲ್ಲಿ ಮಂತ್ರಿಯಾದ ಇತಿಹಾಸವಿದೆ. ಜಿಲ್ಲಾ ಸಚಿವ ಸ್ಥಾನದ ಪಟ್ಟ ಪಡೆದು ಪ್ರಾಬಲ್ಯ ಮೆರೆದಿದ್ದರು.

2008ರಲ್ಲಿ ಸಾಮಾನ್ಯ ಕ್ಷೇತ್ರವಾಗಿ ಬದಲಾದ ವೇಳೆ ಮಂತ್ರಿ ಸ್ಥಾನ ಉಳಿಸಿ ಕೊಂಡಿದ್ದ ಕ್ಷೇತ್ರ ಜಿಲ್ಲಾ ಸಚಿವ ಸ್ಥಾನದಿಂದ ವಂಚಿತವಾಗಿತ್ತು. 2013 ಮತ್ತು 2018ರ ವಿಧಾನಸಭಾ ಚುನಾವಣೆ ವೇಳೆ ಮಂತ್ರಿ ಸ್ಥಾನವೂ ಕ್ಷೇತ್ರದಿಂದ ಕೈತಪ್ಪಿತ್ತು.

ಆದರೀಗ ದಶಕದ ನಂತರ ಹಿರಿಯೂರು ಅದೃಷ್ಟದ ಕ್ಷೇತ್ರ ಎಂಬ ಪಟ್ಟವನ್ನು ಮರಳಿ ಪಡೆದಿದೆ ಜತೆಗೆ ಜಿಲ್ಲಾ ಮಂತ್ರಿಗಿರಿಗೂ ಪೈಪೋಟಿ ಒಡ್ಡಿದೆ.

ಹಿರಿಯೂರು ಶಾಸಕ ಡಿ.ಸುಧಾಕರ್ ಜಿದ್ದಾ ಜಿದ್ದಿ ಮಧ್ಯೆ ಸಚಿವಸ್ಥಾನ ಪಡೆದಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಇವರೀಗ ಉಸ್ತುವಾರಿಗೆ ಪಟ್ಟು ಹಿಡಿದಿದ್ದಾರೆ.

ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್,ಇದೀಗ ಜಾತಿ ಲೆಕ್ಕಚಾರದಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಸಚಿವ, ನಾಯಕ ಸಮುದಾಯವನ್ನು ಪ್ರತಿನಿಧಿಸುವ ತುಮಕೂರಿನ ಕೆ.ಎನ್.ರಾಜಣ್ಣ ಅವರಿಗೆ ಚಿತ್ರದುರ್ಗದ ಉಸ್ತುವಾರಿ ನೀಡಿ ರಾಜಕೀಯ ಲಾಭ ಪಡೆಯುವ ನಿರೀಕ್ಷೆಯಲ್ಲಿದೆ. ಒಂದು ವೇಳೆ ಈ ಲೆಕ್ಕಾಚಾರ ನಿಜವಾದರೆ ಸುಧಾಕರ್ ಕನಸಿಗೆ ಅಡ್ಡಿಯಾಗುವ ಆತಂಕವಿದೆ.

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ತುಮಕೂರು ಉಸ್ತುವಾರಿ ನಿಶ್ಚಿತವಾಗಿದೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ನಾಯಕ ಸಮುದಾಯದ ಮತಗಳು 2 ಲಕ್ಷಕ್ಕಿಂತ ಹೆಚ್ಚಿವೆ. ಅದೇ ಸಮಾಜದ ರಾಜಣ್ಣ ಅವರಿಗೆ ಉಸ್ತುವಾರಿ ಸಚಿವಗಿರಿ ನೀಡಿದರೆ ಅನುಕೂಲವಾಗಲಿದೆ ಎನ್ನಲಾಗಿದೆ.

2008ರಲ್ಲಿ ಡಿ.ಸುಧಾಕರ್, ಗೂಳಿಹಟ್ಟಿ ಶೇಖರ್ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿ ಸಚಿವರಾದರೂ ಉಸ್ತುವಾರಿ ಪಟ್ಟ ಸಿಕ್ಕಿರಲಿಲ್ಲ. ಈಗಲೂ ಕಷ್ಟ ಸಾಧ್ಯ ಎಂಬ ಸ್ಥಿತಿ ಇದೆ.

ಮೀಸಲು ಕ್ಷೇತ್ರದವರೇ ಹೆಚ್ಚು
ಜಿಲ್ಲಾ ಸಚಿವರಾಗಿ ಆಡಳಿತ ನಡೆಸಿದವರಲ್ಲಿ ಮೀಸಲು ಕ್ಷೇತ್ರದಲ್ಲಿ ಗೆದ್ದವರೇ ಹೆಚ್ಚು ಎಂಬುದು ವಿಶೇಷ. ಹಿರಿಯೂರು ಮೀಸಲು ಕ್ಷೇತ್ರದಿಂದ ಕೆ.ಎಚ್.ರಂಗನಾಥ್, ಡಿ.ಮಂಜುನಾಥ್, ಇದಾದ ಬಳಿಕ ಸಾಮಾನ್ಯ ಕ್ಷೇತ್ರ ಚಿತ್ರದುರ್ಗದಿಂದ ಎಚ್.ಏಕಾಂತಯ್ಯ, ಚಳ್ಳಕೆರೆಯಿಂದ ಗೆದ್ದಿದ್ದ ಬಿ.ಎಲ್.ಗೌಡ ಕೆಲಕಾಲ ಉಸ್ತುವಾರಿ ಸಚಿವರಾಗಿದ್ದರು.

2000-2013ರವರೆಗೆ ಹೊರಗಿನ ಜಿಲ್ಲೆಯ ಬಸವರಾಜ ಹೊರಟ್ಟಿ, ಆನಂದ್ ಆಸ್ನೋಟಿಕರ್, ಜಿ.ಕರುಣಾಕರರೆಡ್ಡಿ 2022ರಲ್ಲಿ ಬಿ.ಸಿ.ಪಾಟೀಲ್ ಅವರಿಗೆ ಜಿಲ್ಲಾ ಮಂತ್ರಿಗಿರಿ ಒಲಿದು ಬಂದಿತ್ತು.

2013ರಲ್ಲಿ ಹೊಳಲ್ಕೆರೆ ಮೀಸಲು ಕ್ಷೇತ್ರದಿಂದ ಎಚ್.ಆಂಜನೇಯ, 2018ರಲ್ಲಿ ಮೊಳಕಾಲ್ಮೂರು ಎಸ್ಟಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಬಿ.ಶ್ರೀರಾಮುಲು ಜಿಲ್ಲಾ ಸಚಿವರಾಗಿದ್ದರು.

ನಾನು ಕಾಂಗ್ರೆಸ್ ನಿಷ್ಠಾವಂತ. ಜಿಲ್ಲಾ ಉಸ್ತುವಾರಿ ಯಾರಿಗೆ ನೀಡಬೇಕು ಎನ್ನುವುದನ್ನು ಪಕ್ಷ ನಿರ್ಧರಿಸಲಿದೆ. ಅವಕಾಶ ಸಿಕ್ಕರೆ ಜಿಲ್ಲೆಯ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಯ ರಥ ಎಳೆಯಲಾಗುವುದು.ಡಿ.ಸುಧಾಕರ್, ಯೋಜನೆ-ಸಾಂಖ್ಯಿಕ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net