ಮೊದಲ ಹಂತದ ಸಮೀಕ್ಷೆ ಸುಗಮ

CTD 16 ICMR
Published on

ಚಿತ್ರದುರ್ಗ: ಸಮುದಾಯದಲ್ಲಿ ಕೋವಿಡ್-19 ಸೋಂಕು ಹರಡಿರಬಹುದಾದ ಸಾಧ್ಯತೆ ಪರಿಶೀಲನೆಗಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಎನ್‌ಐಆರ್‌ಟಿಯ 30 ತಜ್ಞರ ತಂಡದೊಂದಿಗೆ ಶನಿವಾರ ಜಿಲ್ಲೆಯಲ್ಲಿ ನ್ಯಾಷನಲ್ ಸಿರೋ ಸರ್ವೆಲೆನ್ಸ್ ಫಾರ್ ಕೋವಿಡ್-19 ಸಮೀಕ್ಷೆ ನಡೆಸಿ 400 ಮಾದರಿ ಸಂಗ್ರಹಿಸಿದೆ.

ರಾಜ್ಯದಲ್ಲಿ ಈ ಸಮೀಕ್ಷೆಗಾಗಿ ಐಸಿಎಂಆರ್ ಚಿತ್ರದುರ್ಗ, ಬೆಂಗಳೂರು ನಗರ ಹಾಗೂ ಕಲಬುರಗಿ ಜಿಲ್ಲೆಗಳನ್ನು ಆಯ್ಕೆ ಮಾಡಿದ್ದು, ಚಿತ್ರದುರ್ಗ ಜಿಲ್ಲೆಯ 10 ಸ್ಥಳಗಳಲ್ಲಿ ಸಮೀಕ್ಷೆ ನಡೆದಿದೆ. ಎಲ್ಲ ಮಾದರಿಗಳ ಎಲಿಸಾ ಪರೀಕ್ಷೆ ಬೆಂಗಳೂರಿನಲ್ಲಿ ನಡೆಯಲಿದೆ.

ಎನ್‌ಐಆರ್‌ಟಿ ತಂಡದೊಂದಿಗೆ ಸ್ಥಳೀಯ ವೈದ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು, ತಾಲೂಕು ಆಡಳಿತದ ಅಧಿಕಾರಿ ಸಿಬ್ಬಂದಿ ಸಮೀಕ್ಷೆಗೆ ಕೈ ಜೋಡಿಸಿದ್ದರು.

ಚಿತ್ರದುರ್ಗ ತಾಲೂಕಿನ ವಡ್ಡನಹಳ್ಳಿ, ಚಳ್ಳಕೆರೆ ತಾಲೂಕಿನ ಘಟಪರ್ತಿ, ಪರುಶುರಾಂಪುರ ಹಾಗೂ ಚಳ್ಳಕೆರೆ ವಾರ್ಡ್ ಸಂಖ್ಯೆ 22, ಹಿರಿಯೂರು ತಾಲೂಕಿನ ಭರಮಗಿರಿ, ಹೊಳಲ್ಕೆರೆ ಪಟ್ಟಣದ ವಾರ್ಡ್ 5, ಈ ತಾಲೂಕಿನ ಹಿರೇಕಂದವಾಡಿ, ಹೊಸದುರ್ಗ ತಾಲೂಕಿನ ತುಂಬಿನಕೆರೆ, ಹಾಗಲಕೆರೆ ಹಾಗೂ ಮೊಳಕಾಲ್ಮೂರು ತಾಲೂಕಿನ ಕಾಟನಾಯಕನಹಟ್ಟಿಗಳಲ್ಲಿ ಮಾದರಿ ಸಂಗ್ರಹಿಸಲಾಯಿತು.

ಒಟ್ಟು ಪ್ರದೇಶವನ್ನು 4 ಕ್ಲಸ್ಟರ್‌ಗಳಾಗಿ ವಿಂಗಡಿಸಿ, ಪ್ರತಿ ಕ್ಲಸ್ಟರ್‌ನಿಂದ ರ‌್ಯಾಂಡಮ್ ಸ್ಯಾಂಪಲಿಂಗ್ ಮಾದರಿ ಮನೆಗಳನ್ನು ಆಯ್ಕೆ ಮಾಡಿ ಕೊಳ್ಳಲಾಗಿತ್ತು. ಆ ಮನೆಯ ಆಯ್ದ ವ್ಯಕ್ತಿಗೆ ಆಪ್ತ ಸಮಾಲೋಚನೆ ನಡೆಸಿ, ಪ್ರಶ್ನಾವಳಿಗಳಿಗೆ ಉತ್ತರ ಪಡೆಯಲಾಯಿತು.

ಅವರ ಸಮ್ಮತಿಯೊಂದಿಗೆ ರಕ್ತದ ಮಾದರಿ ಸಂಗ್ರಹಿಸಲಾಯಿತು. ಈ ಸಂದರ್ಭ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಜಿಲ್ಲೆಯ ಯಾವುದೇ ಗ್ರಾಮ ಅಥವಾ ಸ್ಥಳದಲ್ಲಿ ಯಾರಿಂದಲೂ ಸಮೀಕ್ಷೆಗೆ ಅಪಸ್ವರ ಕಂಡುಬರಲಿಲ್ಲ. ಸಮೀಕ್ಷಾ ಕಾರ್ಯ ಹಾಗೂ ಮಾದರಿ ಸಂಗ್ರಹ ಸಂದರ್ಭದಲ್ಲಿ ಸಿಬ್ಬಂದಿ ಪಿಪಿಇ ಕಿಟ್ ಬಳಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net