

ಚಿತ್ರದುರ್ಗ: ಅಂತರ ರಾಜ್ಯ ನಿಯಮಾವಳಿ ಅನ್ವಯ ಅನುಮಪತಿ ಪಡೆಯದೆ ಅಹಮದಾಬಾದ್‌ನಿಂದ ಮಂಗಳವಾರ ಆಗಮಿಸಿದ್ದ 15 ತಬ್ಲಿಘಿ ಸದಸ್ಯರು ಹಾಗೂ ಅಜ್ಮೀರದಿಂದ ಚಿತ್ರದುರ್ಗಕ್ಕೆ ಬುಧವಾರ ಬಂದಿಳಿದ 21 ಪ್ರವಾಸಿಗರು ಸೇರಿ 36 ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ಎಲ್ಲರನ್ನೂ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಿದ್ದಾರೆ.
ಅಜ್ಮೀರ್‌ಗೆ ತೆರಳಿದ್ದ 21 ಜನರು ಪಾಸ್ ಪಡೆಯದೆ ಚಿತ್ರದುರ್ಗ ತಾಲೂಕು ಬೊಗಳೇರಹಟ್ಟಿ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಗಳೂರಿಗೆ ಹೊರಟಿದ್ದರು. ಈ ಪೈಕಿ ಕೆಲವರು ಅನ್ಯರಾಜ್ಯದವರಿದ್ದರು.ಇವರ ಪ್ರಯಾಣ ಮಾಹಿತಿ ಚಿತ್ರದುರ್ಗ ಜಿಲ್ಲಾಡಳಿತಕ್ಕಿರಲಿಲ್ಲ. ಪಾಸ್ ಪಡೆದು ಸ್ವಸ್ಥಳಗಳಿಗೆ ಕಳುಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.
ಮಂಗಳವಾರ ಖಾಸಗಿ ಬಸ್ಸಿನಲ್ಲಿ ಬಂದ ಚಿತ್ರದುರ್ಗದ 15 ತಬ್ಲಿಘಿಗಳ ಆರೋಗ್ಯ ಪರೀಕ್ಷಿಸಿ ಈಗಾಗಲೇ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಡಲಾಗಿದೆ. ಸಾರ್ವಜನಿಕರಿಗೆ ಯಾವುದೇ ಆತಂಕ ಬೇಡ. ಅಹಮದಾಬಾದ್ ಜಿನಾತ್‌ಪುರ ತರ್ಕೇಜ್ ಮಸೀದಿ ಸಮಾವೇಶಕ್ಕೆ ಮಾ. 8ರಂದು ತೆರಳಿದ್ದ ಇವರು ಪೂರ್ವ ನಿಗದಿಯಂತೆ ಏಪ್ರಿಲ್ 14ರಂದು ನಗರಕ್ಕೆ ಬರಬೇಕಿತ್ತು. ಲಾಕ್‌ಡೌನ್ ಕಾರಣ ಸಾಧ್ಯವಾಗಿರಲಿಲ್ಲ.
ಈಗ ಅಲ್ಲಿಯ ಜಿಲ್ಲಾಡಳಿತದ ಅನುಮತಿ ಪಡೆದು ಬಂದಿದ್ದರೂ ಅದು ಅಂತರ ರಾಜ್ಯ ಪ್ರಯಾಣ ನಿಯಮಗಳ ಪ್ರಕಾರ ಇಲ್ಲದ ಕಾರಣ ಇವರನ್ನು ಸ್ಟ್ಯಾಂಡರ್ಸ್ ಆಪರೇಷನ್ ಪ್ರೊಟೊಕಾಲ್ ಪ್ರಕಾರ ಚಿತ್ರದುರ್ಗದಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಮತ್ತೊಮ್ಮೆ ಪರೀಕ್ಷೆ: ಅಹಮದಾಬಾದ್, ಸೂರತ್, ನಾಸಿಕ್, ಸೊಲ್ಲಾಪುರ, ವಿಜಯಪುರ, ಹೊಸಪೇಟೆ ಮಾರ್ಗವಾಗಿ ಚಿತ್ರದುರ್ಗಕ್ಕೆ ಬಂದಿದ್ದಾರೆ. ಗುಜರಾತ್‌ನಲ್ಲಿದ್ದಾಗ 15 ಜನರ ಪೈಕಿ ಪಾಸಿಟಿವ್ ಇದ್ದ ನಾಲ್ವರು ಅಲ್ಲೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಈಗ ಇವರಲ್ಲಿ ಯಾರಿಗೂ ಸೋಂಕು ಇಲ್ಲ ಎಂದು ಅಲ್ಲಿನ ಸರ್ಕಾರ ಪ್ರಮಾಣ ಪತ್ರ ಕೊಟ್ಟಿದೆ. ಆದರೂ ಮತ್ತೊಮ್ಮೆ ಎಲ್ಲರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ ಎಂದರು.
ಪಾಸ್ ಇರಲಿಲ್ಲ: ರಾಜಸ್ತಾನಕ್ಕೆ ತೆರಳಿದ್ದ 21 ಪ್ರವಾಸಿಗರನ್ನು ಪರಿಶೀಲಿಸಿದಾಗ ಪಾಸ್ ಇರದ ಕಾರಣ ಸದ್ಯಕ್ಕೆ ಅವರನ್ನೂ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿಡಲಾಗಿದೆ.ಇವರಲ್ಲಿ ಕೆಲವರು ಅನ್ಯ ರಾಜ್ಯದವರಿದ್ದಾರೆ. ಪಾಸ್ ವ್ಯವಸ್ಥೆ ಕಲ್ಪಿಸಿ ಇವರನ್ನು ಅವರವರ ಸ್ವ ಸ್ಥಳಗಳಿಗೆ ಕಳಿಸುವುದಾಗಿ ಹೇಳಿದರು.