

ಚಿತ್ರದುರ್ಗ: ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮಳ ಸಹನಾ ಶಕ್ತಿ, ಕ್ಷಮಾಗುಣ ಇಂದಿನ ಯುವ ಜನರಿಗೆ ಸ್ಫೂರ್ತಿಯ ಸೆಲೆಯಾಗಿದೆ ಎಂದು ಜಿಪಂ ಸಿಇಒ ಎಸ್.ಹೊನ್ನಾಂಬ ಹೇಳಿದರು.
ಡಿಸಿ ಕಚೇರಿಯಲ್ಲಿ ಭಾನುವಾರ ಹೇಮರಡ್ಡಿ ಮಲ್ಲಮ್ಮ ಜಯಂತಿ ಅಂಗವಾಗಿ ಮಲ್ಲಮ್ಮ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಮಲ್ಲಮ್ಮರ ತತ್ವ, ಸಿದ್ಧಾಂತಗಳು ಮನುಕುಲಕ್ಕೆ ಆದರ್ಶವಾಗಿವೆ. ಭಕ್ತಿ, ಸೇವೆ ಮೂಲಕ ಮಲ್ಲಮ್ಮ ಸಾಮಾನ್ಯರ ಹೃದಯದಲ್ಲಿ ನೆಲೆಸಿದ್ದಾರೆ. ಧರ್ಮ, ಜಾತಿ, ದೇಶ, ಭಾಷೆ ಮುಂತಾದ ಮಾನವ ಕಲ್ಪಿತ ವಿಷಯಗಳನ್ನು ಮೀರಿ, ಸತ್ಯ ದರ್ಶನ ಮಾರ್ಗವನ್ನು ತೋರಿದ್ದರು ಎಂದರು.
ಜೀವನ ಸಂಸಾರದ ನಡುವೇ ಇದ್ದುಕೊಂಡೇ, ಅದರಲ್ಲಿನ ಸುಖ, ದುಃಖಗಳನ್ನು ಸಮಚಿತ್ತದಿಂದ ಅನುಭವಿಸಿದ ಮಲ್ಲಮ್ಮ, ಅಂಧಕಾರದಲ್ಲಿದ್ದ ಮೂಢರನ್ನು ಅನುಭಾವದೆಡೆಗೆ ಕೊಂಡೊಯ್ದ ಮಹಾ ಸಾದ್ವಿಯಾಗಿದ್ದಾಳೆ. ಸದಾ ಕಾಯಕದಲ್ಲಿ ತೊಡಗಿದವರಿಗೆ ದೈವದ ಅನುಗ್ರಹವಾಗುತ್ತದೆ. ಸರಳ ಜೀವನದೊಂದಿಗೆ ಸೇವಾ ಭಾವನೆಯಲ್ಲಿರುವ ಪ್ರತಿಯೊಬ್ಬರಲ್ಲೂ ಮಲ್ಲಮ್ಮ ನೆಲೆಸಿದ್ದಾಳೆ ಎಂದು ತಿಳಿಸಿದರು.
ಕೋವಿಡ್-19 ಸೋಂಕು ಭೀತಿ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಸರಳವಾಗಿ ಆಯೋಜಿಸಲಾಗಿತ್ತು. ಎಡಿಸಿ ಸಿ.ಸಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ರೇಖಾ, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ವೈಶಾಲಿ, ಕೆಪಿಎಂ ಗಣೇಶಯ್ಯ ಇದ್ದರು.