ಸರ್ಕಾರಿ ಸವಲತ್ತು ಪಡೆಯಲು ಜನರ ನಿರಾಸಕ್ತಿ

ctd 25 janaspadnana (1)
Published on

ಚಿತ್ರದುರ್ಗ: ಸರ್ಕಾರಿ ಸವಲತ್ತುಗಳನ್ನು ಪಡೆಯಲು ಜಿಲ್ಲೆಯಲ್ಲಿ ಜನ ನಿರೀಕ್ಷಿತ ಮಟ್ಟದಲ್ಲಿ ಬರುತ್ತಿಲ್ಲ. ಮಾಹಿತಿ ಕೊರತೆಯೋ ಅಥವಾ ಜನರ ನಿರಾಸಕ್ತಿಯೋ ತಿಳಿಯದಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವಿನೋತ್‌ಪ್ರಿಯಾ ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ಸಿಂಗಾಪುರ ಕಾವಲ್‌ಹಟ್ಟಿ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಜಿಲ್ಲಾಡಳಿತ ಮಂಗಳವಾರ ಏರ್ಪಡಿಸಿದ್ದ ಜನಸ್ಪಂದನ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಬಡವರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಭದ್ರತೆಗಾಗಿ ಸರ್ಕಾರ ಜಾರಿಗೊಳಿಸಿರುವ ಹಲವು ಯೋಜನೆಗಳ ಸವಲತ್ತುಗಳನ್ನು ಪಡೆಯ ಲು ಹಿಂಜರಿಕೆ ಬೇಡ. ಗ್ರಾಮೀಣರ ಸಮಸ್ಯೆಗಳಿಗೆ ಸ್ಥಳೀಯವಾಗಿ ಪರಿಹಾರ ಕಂಡುಕೊಳ್ಳಲು ಈ ಸಭೆ ಆಯೋಜಿಸಲಾಗಿದೆ. ಕೃಷಿ, ತೋಟಗಾರಿಕೆ, ಕಾರ್ಮಿಕ, ಆರೋಗ್ಯ ಹೀಗೆ ಹತ್ತು ಹಲವು ಇಲಾಖೆಗಳಲ್ಲಿ ಜನರ ಶ್ರೇಯೋಭಿವೃದ್ಧಿಗೆ ನಾನಾ ಕಾರ‌್ಯಕ್ರಮಗಳಿವೆ ಎಂದರು.

ಎಲ್ಲ ಅರ್ಹ ಬಿಪಿಎಲ್ ಕುಟುಂಬದವರು ತಪ್ಪದೆ ಎಬಿಎಆರ್‌ಕೆ ಕಾರ್ಡ್ ಪಡೆದುಕೊಳ್ಳಲು, ಜಿಲ್ಲೆಯಲ್ಲಿ 6 ತಿಂಗಳಿಂದ 6 ವರ್ಷ ವಯೋಮಿತಿಯೊಳಗಿನ ಅಂಗವಿಕಲರ ಪತ್ತೆಗೆ ವಿಶೇಷ ಕಾರ್ಯಕ್ರಮ, ಪೌತಿ ಖಾತೆ ಆಂದೋಲನ ನಡೆದಿದೆ. ಸ್ವ ಉದ್ಯೋಗಕ್ಕಾಗಿ ಕೌಶಲ್ಯ ತರಬೇತಿ, ಆರ್ಥಿಕ ನೆರವು ಒದಗಿಸಲಾಗುತ್ತಿದೆ ಎಂದರು.

ತಾಪಂ ಅಧ್ಯಕ್ಷ ಡಿ.ಎಂ.ಲಿಂಗರಾಜು ಮಾತನಾಡಿ, ತಾಲೂಕಿನ ಹುಲ್ಲೂರು ಗ್ರಾಮ ವ್ಯಾಪ್ತಿಯ 17 ಗ್ರಾಮಗಳಿಗೆ ಶಾಂತಿ ಸಾಗರದಿಂದ 3.5 ಕೋಟಿ ರೂ. ವೆಚ್ಚದಲ್ಲಿ ನೀರು ಪೂರೈಸಲು ಜಿಲ್ಲಾಧಿಕಾರಿ ಹಾಗೂ ಶಾಸಕರು ನೆರವು ನೀಡಿದ್ದಾರೆ. ನೀರಿಗಾಗಿ ರಸ್ತೆ ತಡೆ ನಡೆಸಿ ಪ್ರತಿಭ ಟನೆ ನಡೆಸಿದ್ದ 30 ಕ್ಕೂ ಹೆಚ್ಚು ಗ್ರಾಮಸ್ಥರ ಮೊಕದ್ದಮೆ ಹಿಂಪಡೆಯುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಗ್ರಾಮಸ್ಥರು ನಾನಾ ಅಹವಾಲನ್ನು ಸಲ್ಲಿಸಿದರು.

ತಹಸೀಲ್ದಾರ್ ಜೆ.ಸಿ.ವೆಂಕಟೇಶಯ್ಯ ಮಾತನಾಡಿ, ಗ್ರಾಪಂಗಳಲ್ಲಿ ರೈತರಿಗೆ ಪಹಣಿ ವಿತರಣೆ ಹಾಗೂ ಆಧಾರ್ ತಿದ್ದುಪಡಿ ಆಗುತ್ತಿಲ್ಲ. ಇದರಿಂದಾಗಿ ಗ್ರಾಮೀಣರು ನೂರಾರು ರೂ. ಖರ್ಚು ಮಾಡಿಕೊಂಡು ಜಿಲ್ಲಾ ಕೇಂದ್ರಕ್ಕೆ, ತಹಸೀಲ್ದಾರ್ ಕಚೇರಿಗಳಿಗೆ ಅಲೆದಾಡು ವಂತಾಗಿದೆ ಎಂದರು.

ಸಭೆ ಅಂಗವಾಗಿ ಕಾರ್ಮಿಕ ಇಲಾಖೆ ತೆರೆದಿದ್ದ ವಿಶೇಷ ಕೌಂಟರ್‌ನಲ್ಲಿ 25 ಕ್ಕೂ ಹೆಚ್ಚು ಕಾರ್ಮಿಕರು ನೋಂದಣಿಗೆ ಅರ್ಜಿ ಸಲ್ಲಿಸಿದರು. ವಿವಿಧ ಸವಲತ್ತು ಮಂಜೂರಾತಿ, ಕುಂದುಕೊರತೆಗಳ ಕುರಿತು 30 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು. ಇದೇ ವೇಳೆ ನಾನಾ ಯೋಜನೆಗಳ ಫಲಾನುಭವಿಗಳಿಗೆ ಮಂಜೂರಾತಿ ಪತ್ರ, ಎಬಿಎಆರ್‌ಕೆ ಕಾರ್ಡ್, ಮಕ್ಕಳಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು. ಎಎಸ್ಪಿ ಎಂ.ಬಿ.ನಂದಗಾವಿ, ಗ್ರಾ.ಪಂ.ಅಧ್ಯಕ್ಷೆ ಪಾರ್ವತಮ್ಮ, ಉಪಾಧ್ಯಕ್ಷೆ ನಿರ್ಮಲಮ್ಮ, ಎಸಿ ವಿ.ಪ್ರಸನ್ನ, ಜಿ.ಪಂ. ಉಪಕಾರ್ಯದರ್ಶಿ ಡಾ.ರಂಗಸ್ವಾಮಿ ಮತ್ತಿತರ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net