ಜಿಲ್ಲಾಧಿಕಾರಿಗಳಿಗೆ ಬೇಡ ಪ್ರತಿಷ್ಠಾನದ ಅಧ್ಯಕ್ಷ ಪಟ್ಟ

CTD 8 TRUST(2)
Published on

ಚಿತ್ರದುರ್ಗ: ಟ್ರಸ್ಟ್ ಹಾಗೂ ಪ್ರತಿಷ್ಠಾನಗಳ ಅಧ್ಯಕ್ಷರಾಗಿ ಜಿಲ್ಲಾಧಿಕಾರಿಗಳನ್ನು ಮುಂದುವರಿಸುವುದಕ್ಕೆ ರಾಜ್ಯದ ಟ್ರಸ್ಟ್ ಹಾಗೂ ಪ್ರತಿಷ್ಠಾನಗಳ ಸಭೆಯಲ್ಲಿ ವಿರೋಧ ವ್ಯಕ್ತವಾಯಿತು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಅಧ್ಯಕ್ಷತೆಯಲ್ಲಿ ಸೀಬಾರದ ರಾಷ್ಟ್ರನಾಯಕ ಎಸ್.ನಿಜಲಿಂಗಪ್ಪ ಸ್ಮಾರಕ ಟ್ರಸ್ಟ್ ಆವರಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಸದಸ್ಯರು, ಹಲವು ಸಂಸ್ಥೆಗಳಲ್ಲಿ ಲಕ್ಷಾಂತರ ರೂ. ಉಳಿದಿದೆ ಎಂದರೆ ಅದು ಉಳಿತಾಯವಲ್ಲ, ಅದು ಕೊಳೆತಾಯವೆಂದು ವ್ಯಂಗ್ಯವಾಡಿದರು.

ಡಿಸಿಗಳು ಅಧ್ಯಕ್ಷರಾದ ಸಂಸ್ಥೆಗಳ ಸಭೆಗಳು ನಾಮಕಾವಾಸ್ತೆ ಎಂಬಂತಾಗಿವೆ. ನಾವು ಅಲ್ಲಿ ಉತ್ಸವ ಮೂರ್ತಿಗಳಾಗಿದ್ದೇವೆ. ಡಿಸಿಗಳು ಸಭೆಗಳನ್ನೇ ನಡೆಸುವುದಿಲ್ಲ, ನಡೆಸಿದರೂ ಐದು ನಿಮಿಷದ ಅವಧಿ ದಾಟುವುದಿಲ್ಲ. ಆದ್ದರಿಂದ ಕ್ರಿಯಾಶೀಲ ಸದಸ್ಯರಲ್ಲೇ ಒಬ್ಬರನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕೆಂದು ಮನವಿ ಮಾಡಿದರು.

ಸದಸ್ಯರ ಸಲಹೆಗೆ ತಾತ್ವಿಕ ಒಪ್ಪಿಗೆ ಸೂಚಿಸಿದ ಸಚಿವರು, ಈ ಕುರಿತಂತೆ ರಚಿಸುವ ತಜ್ಞರ ಸಮಿತಿ ಆಧರಿಸಿ ಸೂಕ್ತ ಕ್ರಮದ ಭರವಸೆ ನೀಡಿದರು. ವಯಸ್ಸು ಹಾಗೂ ಅನಾರೋಗ್ಯದ ಕಾರಣಕ್ಕೆ ಕ್ರಿಯಾಶೀಲವಾಗಿರದ ಸಾಧಕ ಸದಸ್ಯರನ್ನು ಗೌರವದಿಂದ ಬೀಳ್ಕೊಟ್ಟು, ಅವರ ಜಾಗಕ್ಕೆ ಮತ್ತೊಬ್ಬರನ್ನು ನೇಮಿಸಬಹುದೆಂದು ಸಲಹೆ ನೀಡಿದರು.

ರಾಜ್ಯದಲ್ಲಿ ಹಲವು ಕ್ಷೇತ್ರಗಳ ಅನೇಕ ಸಾಧಕರು, ಮಹನೀಯರ ಸ್ಮರಣೆಗಾಗಿ ಸ್ಥಾಪಿತವಾದ ಟ್ರಸ್ಟ್ ಹಾಗೂ ಪ್ರತಿಷ್ಠಾನಗಳು ಸರ್ಕಾರಿ ಕೇಂದ್ರಿತವಾಗದೇ, ಸಮಾಜ ಕೇಂದ್ರಿತವಾಗಬೇಕು. ಅಕ್ಕಿಯಲ್ಲಿ ಕಲ್ಲಿರುವಂತೆ ಕೆಲ ಸಂಸ್ಥೆಗಳು ಉದ್ದೇಶ ಮರೆತು ಕೆಲಸ ಮಾಡುತ್ತಿದ್ದು,ದೋಷ ಸರಿಪಡಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು. ಬಜೆಟ್‌ಗೂ ಮೊದಲು ಮಾಹಿತಿ ಪಡೆದರೆ ಅನುಕೂಲ ಎಂಬ ಕಾರಣಕ್ಕೆ ಈ ಸಭೆ ನಡೆಸಲಾಗುತ್ತಿದೆ. ಅಕಾಡೆಮಿ ಹಾಗೂ ಪ್ರಾಧಿಕಾರಗಳ ಮುಖ್ಯಸ್ಥರ ಸಭೆಯನ್ನೂ ನಡೆಸಲಾಗಿದೆ ಎಂದು ಸಚಿವ ರವಿ ತಿಳಿಸಿದರು.

ಜಯಂತಿ ಆಚರಣೆ: ರಾಜ್ಯದಲ್ಲಿ ಸದ್ಯ 26 ಕ್ಕೂ ಹೆಚ್ಚು ಮಹನೀಯರ ಜಯಂತಿ ಆಚರಿಸಲಾಗುತ್ತಿದೆ. ಇನ್ನೂ ಐದಾರು ಮಹನೀಯರ ಹೆಸರು ಪರಿಗಣನೆಗೆ ಬೇಡಿಕೆ ಬಂದಿವೆ. ಆದರೆ ಸದ್ಯದ ಜಯಂತಿಗಳಿಗೆ ವ್ಯಕ್ತವಾಗುತ್ತಿರುವ ಜನಸ್ಪಂದನೆ ಕುರಿತು ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದರು.

ಪ್ರತಿಷ್ಠಾನಗಳ ಪ್ರಶಸ್ತಿ ಮೊತ್ತವನ್ನು ಕಡಿತಗೊಳಿಸಿಲ್ಲ. ಕನಿಷ್ಠ 10 ಸಾವಿರ ರೂ. ಎಂದು ಭಾವಿಸಬೇಕು. ಸರ್ಕಾರಿ ಅನುದಾನದಲ್ಲಿ 10 ಸಾವಿರ ರೂ. ಕೊಡಲಾಗುತ್ತಿದೆ. ಕೆಲ ಸಂಸ್ಥೆಗಳು ದೇಣಿಗೆ ಮೂಲಕ ಈ ಮೊತ್ತವನ್ನು ಹೆಚ್ಚಿಸಿಕೊಂಡಿವೆ ಎಂದರು.

ಕುವೆಂಪು, ಬೇಂದ್ರೆ, ವಿಕೃ ಗೋಕಾಕ್, ಪುತಿನ, ಮಲ್ಲಿಕಾರ್ಜುನ ಮನ್ಸೂರ್, ಪಿ.ಬಿ.ಧುತ್ತರಗಿ, ಮಾಸ್ತಿ, ಹುತಾತ್ಮ ಮೈಲಾರ ಮಹಾದೇವ, ಡಿವಿಜಿ, ರನ್ನ, ಡಿ.ವಿ.ಹಾಲಬಾವಿ, ಹಲಸಂಗಿ, ಗಳಗನಾಥ, ಆಲೂರು ವೆಂಕಟರಾಯ, ಬಸವರಾಜ ರಾಜಗುರು, ಬೆಟಗೇರಿ ಕೃಷ್ಣಶರ್ಮ, ಬಸವರಾಜ ಕಟ್ಟಿಮನಿ, ಡಾ.ಗುಬ್ಬಿವೀರಣ್ಣ, ಕೆ.ಎಸ್.ನರಸಿಂಹಸ್ವಾಮಿ ಹಾಗೂ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಸೇರಿದಂತೆ ಒಟ್ಟು 25 ಟ್ರಸ್ಟ್ ಹಾಗೂ ಪ್ರತಿಷ್ಠಾನಗಳು ಪಡೆದ ಅನುದಾನ, ಸ್ವಂತ ಕಟ್ಟಡ ಇದೆಯೇ, ಕಾರ‌್ಯಚಟುವಟಿಕೆಗಳು, ಪ್ರಶಸ್ತಿ ಇತ್ಯಾದಿ ಕುರಿತು ಸಚಿವರು ಮಾಹಿತಿ ಪಡೆದರು. ಮಾಜಿ ಶಾಸಕ ಚಂದ್ರಕಾಂತ್ ಬೆಲ್ಲದ್, ಪ್ರೊ.ರಾಘವೇಂದ್ರ ಪಾಟೀಲ, ಕಡಿದಾಳ್ ಪ್ರಕಾಶ್ ಮೊದಲಾದವರು ಮಾತನಾಡಿದರು.

ಗಳಗನಾಥರ 151ನೇ ಜಯಂತ್ಯುತ್ಸವ, ಗೋಕಾಕ್‌ರ ಸಮಗ್ರ ಕೃತಿಗಳ ಪ್ರಕಟಣೆ, ಬೇಂದ್ರೆ ದಿನಾಚರಣೆ ಸೇರಿದಂತೆ ನಾನಾ ವಿಷಯ ಗಳ ಕುರಿತಂತೆ ಸಭೆ ಚರ್ಚಿಸಿತು. ಟಸ್ಟ್ ನಿರ್ವಹಣೆಗೆ 25 ಲಕ್ಷ ರೂ. ಅನುದಾನ ಬಿಡುಗಡೆ ಮಾಡುವಂತೆ ನಿಜಲಿಂಗಪ್ಪ ಟ್ರಸ್ಟ್ ಅಧ್ಯಕ್ಷ ಎಚ್.ಹನುಮಂತಪ್ಪ ಕೋರಿದರು.

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಆರ್.ಆರ್.ಜನ್ನು, ನಿರ್ದೇಶಕ ರಂಗಪ್ಪ, ಡಾ.ಬಿ.ಜಯಶ್ರೀ, ಡಾ.ಕಮಲಾಹಂಪನಾ, ಪ್ರಭಾಕರ್ ಸೇರಿದಂತೆ ನಾನಾ ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು ಹಾಗೂ ಸದಸ್ಯ ಕಾರ‌್ಯದರ್ಶಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net