ಮಾಜಿ ಶಾಸಕರ ಪುತ್ರನ ವಿವಾಹ

CTD HSD MARRIAGE 30
Published on

ಚಿತ್ರದುರ್ಗ: ಲಾಕ್ ಡೌನ್ ನಡುವೆ ಜಿಲ್ಲಾಡಳಿತದ ಅನುಮತಿ ಪಡೆದು ಹೊಸದುರ್ಗದ ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಅವರ ಪುತ್ರ ಅರುಣ್ ಅವರ ವಿವಾಹ ಗುರುವಾರ ಬೆಳಗ್ಗೆ ಸ್ವಗ್ರಾಮ ಬೆಲಗೂರಿನ ಮನೆಯಲ್ಲಿ ನಡೆಯಿತು.

ಕುಟುಂಬ ಸದಸ್ಯರು, ಸ್ವಾಮೀಜಿಗಳು ಹಾಗೂ ಸೀಮಿತ ರಾಜಕೀಯ ಮುಖಂಡರಷ್ಟೇ ವಿವಾಹ ಮಹೋತ್ಸವದಲ್ಲಿ ಭಾಗಿಯಾಗಿ ನವ ವಧು ವರರಿಗೆ ಶುಭ ಕೋರಿದರು.

ಮದುವೆಗೆ ಜಿಲ್ಲಾಡಳಿತದಿಂದ ಅನುಮತಿ ಪಡೆದಿದ್ದರೂ ತಾಲೂಕು ಆಡಳಿತಕ್ಕೆ ಅದು ತಿಳಿಯದಿರುವುದು ಚರ್ಚೆಗೆ ಗ್ರಾಸವಾಗಿತ್ತು.

ಸಾಮಾಜಿಕ ಅಂತರ ಕಾಪಾಡಿಕೊಳ್ಳದ ಆರೋಪ: ಮದುವೆಯಲ್ಲಿ 10 ಜನರು ಭಾಗವಹಿಸಲು ಅವಕಾಶ ನೀಡಲಾಗಿತ್ತಾದರೂ ಅದಕ್ಕಿಂತ ಹೆಚ್ಚು ಸಂಖ್ಯೆಯ ಜನರು ಸೇರಿದ್ದರು. ಈ ವೇಳೆ ಸಾಮಾಜಿಕ ಅಂತರ ಕಾಪಾಡಿಕೊಂಡಿಲ್ಲ.ಆಹ್ವಾನಿತರನೇಕರು ಮಾಸ್ಕ್ ಧರಿಸಿರಲಿಲ್ಲ. 10ಕ್ಕೂ ಹೆಚ್ಚು ಕಾರುಗಳು ಬಂದಿದ್ದವು ಎಂಬ ಆರೋಪ ಕೇಳಿ ಬಂದಿವೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.

ಗುಂಪು ಪೋಟೋ ವೈರಲ್: ಮದುವೆಗೆ ಆಗಮಿಸಿದ್ದ ಮಾಜಿ ಸಂಸದ ಎಂ.ಚಂದ್ರಪ್ಪ ಮುಹೂರ್ತ ಸಮಯದಲ್ಲಿ ಮಧುವರರನ್ನು ಆಶೀರ್ವದಿಸುವ ವೇಳೆ ಮಾಸ್ಕ್ ಹಾಕದೆ ಪ್ರಮುಖರ ಜತೆ ಗುಂಪಾಗಿ ನಿಂತಿದ್ದ ಫೋಟೋವನ್ನು ತಮ್ಮ ಸ್ಟೇಟಸ್‌ಗೆ ಹಾಕಿಕೊಂಡಿದ್ದರು. ಈ ಪೋಟೋ ವೈರಲ್ ಆಗಿತ್ತು. ಇದರಿಂದ ರಾಜಕೀಯ ನಾಯಕರೇ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಎನ್ನುವ ಮಾತುಗಳು ಕೇಳಿ ಬಂದವು.

ಅನುಮತಿ ವಿಚಾರ ತಿಳಿದಿಲ್ಲ: ಮಾಜಿ ಶಾಸಕರು ತಮ್ಮ ಮಗನ ಮದುವೆ ನಡೆಸಲು ಜಿಲ್ಲಾಡಳಿತದಿಂದ ಅನುಮತಿ ಪಡೆದ ವಿಷಯ ಗೊತ್ತಿಲ್ಲ. ಈ ಕುರಿತು ತಿಳಿದುಕೊಳ್ಳುತ್ತೇನೆ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಹೇಳಿಕೆ ಚರ್ಚೆಗೆ ಗ್ರಾಸವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net