ಪೂರ್ಣ ಅರಳಲಿಲ್ಲ ಹೂವಿನ ಮಾರುಕಟ್ಟೆ

ctd 20 flaver apmc (1)
Published on

ವಿಜಯವಾಣಿ ವಿಶೇಷ ಚಿತ್ರದುರ್ಗ: ಲಾಕ್‌ಡೌನ್ ಹೊಡೆತಕ್ಕೆ ಸ್ಥಗಿತಗೊಂಡಿದ್ದ ಹೂವಿನ ಸಗಟು ಮಾರುಕಟ್ಟೆ ವಹಿವಾಟು ನಗರದಲ್ಲಿ ಸೋಮವಾರ ಪುನರರಾಂಭವಾಗಿದೆ.

ಕರೊನಾದಿಂದಾಗಿ ಮಾ.24ರಿಂದ ವಹಿವಾಟು ಸ್ಥಗಿತಗೊಂಡಿದ್ದರಿಂದ ದೇವರನ್ನು ನಂಬಿ ಬೆಳೆದಿದ್ದ ಹೂವನ್ನು ಕೊಳ್ಳುವವರಿಲ್ಲದೆ ಬೆಳೆಗಾರರು ಬದುಕು ಬಾಡಿತ್ತು.

ಆದರೀಗ ನಗರಸಭೆ ವ್ಯಾಪ್ತಿಯಲ್ಲಿದ್ದ ಖಾಸಗಿ ಬಸ್ ನಿಲ್ದಾಣದ ಸಗಟು ಮಾರುಕಟ್ಟೆಯ ಬದಲು, ಎಪಿಎಂಸಿ ಕ್ಯೂ ಬ್ಲಾಕ್‌ನಲ್ಲಿ ವಹಿವಾಟು ಆರಂಭವಾಗಿದೆ. ಆದರೆ, ಮೊದಲ ದಿನ ಎಂದಿನ ವಹಿವಾಟಿನ ಲಕ್ಷಣಗಳು ಕಂಡು ಬರಲಿಲ್ಲ. ಅನೇಕ ಬೆಳೆಗಾರರಿಗೆ ಇನ್ನು ಮಾರುಕಟ್ಟೆ ಆರಂಭವಾಗಿರುವ ಮಾಹಿತಿ ತಲುಪಿರಲಿಲ್ಲ.

ಮಧ್ಯಾಹ್ನ 12 ಗಂಟೆ ವೇಳೆಗೆ ಹಾಯ್ಕಲ್, ಜೆ.ಎನ್.ಕೋಟೆ, ಜೋಡಿಚಿಕ್ಕೇನಹಳ್ಳಿ, ಪಲ್ಲವಗೆರೆ ಸೇರಿ ವಿವಿಧೆಡೆಯಿಂದ ಬೆಳೆಗಾರರು ಹಳದಿ, ಬಿಳಿ ಸೇವಂತಿಗೆ, ಕನಕಾಂಬರ ತಂದಿದ್ದರು.

ಕೆಲವರು ಹಳೇ ಸ್ಥಳಕ್ಕೆ ಹೋದರೆ ಇನ್ನೂ ಕೆಲವರು ಬೆಳಗ್ಗೆಯೇ ಚಳ್ಳಕೆರೆ ಗೇಟ್ ಬಳಿ ಮಾರಾಟ ಮಾಡಿದ್ದರು. ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ವಹಿವಾಟು ಸಮಯ ನಿಗದಿಪಡಿಸಬೇಕೆಂಬ ಕೋರಿಕೆ ಇದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸಾಮಾನ್ಯ ದಿನಗಳಲ್ಲಿ ನಿತ್ಯ ಹತ್ತಾರು ಲಕ್ಷ ರೂ. ವಹಿವಾಟು ನಡೆಯುತ್ತದೆ. ಇವತ್ತಿನ ವಹಿವಾಟು ಮೊತ್ತ 50 ಸಾವಿರ ರೂ. ಮೀರಿರಲಿಲ್ಲ. ಒಂದೆರಡು ದಿನಗಳಲ್ಲಿ ರೈತರು, ಚಿಲ್ಲರೆ ಮಾರಾಟಗಾರರು ಈ ಮಾರುಕಟ್ಟೆಗೆ ಬರುವ ನಿರೀಕ್ಷೆ ವ್ಯಕ್ತವಾಗಿದೆ.

ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸುಧಾಕರ್ ಹೇಳಿಕೆ: ಬೆಳೆಗಾರರು, ಸಗಟು ವರ್ತಕರ ಅನುಕೂಲಕ್ಕೆ ಪೂರಕವಾಗಿ ವಹಿವಾಟು ಅವಧಿಯನ್ನು ನಿಗದಿ ಪಡಿಸುವ ಕುರಿತಂತೆ ಎಪಿಎಂಸಿ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು.

ಹೂ, ವ್ಯಾಪಾರಿ ಜೆ.ಶಿವಾನಂದಬ ಹೇಳಿಕೆ: ಎಪಿಎಂಸಿಗೆ ಹೂವು ತರಲು ಸೂಕ್ತ ಸಾರಿಗೆ ವ್ಯವಸ್ಥೆ ಬೇಕಿದೆ. ಹೂಗಳಿಗೆ ಮಧ್ಯ ಕರ್ನಾಟಕದ ನಂ.1ಮಾರುಕಟ್ಟೆ ಎನಿಸಿರುವ ಚಿತ್ರದುರ್ಗದಿಂದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಕಲಬುರಗಿ ಹಾಗೂ ಅಂತರಾಜ್ಯಗಳ ಮಾರುಕಟ್ಟೆಗಳಿಗೆ ಶೇ.80 ಪ್ರಮಾಣದಲ್ಲಿ ಹೂ ಹೋಗುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net