

ಚಿತ್ರದುರ್ಗ: ಜಿಲ್ಲೆಯನ್ನು ಮಲೇರಿಯಾ ಮುಕ್ತ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್.ಪಾಲಾಕ್ಷ ಹೇಳಿದರು.
ಡಿಎಚ್‌ಒ ಕಚೇರಿ ಆವರಣದಲ್ಲಿ ಇತ್ತೀಚೆಗೆ ವಿಶ್ವ ಮಲೇರಿಯಾ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ‘ಶೂನ್ಯ ಮಲೇರಿಯಾ ನನ್ನಿಂದಲೇ ಪ್ರಾರಂಭ’ ಎಂಬ ಘೋಷ ವಾಕ್ಯದಂತೆ ಪ್ರತಿಯೊಬ್ಬರು ಮಲೇರಿಯಾ ನಿರ್ಮೂಲನೆಗೆ ಶ್ರಮಿಸಬೇಕು ಎಂದರು.
ಜಿಲ್ಲಾದ್ಯಂತ ಪತ್ತೆಯಾದ ಮಲೇರಿಯಾ ಪ್ರಕರಣಗಳಿಗೆ ತ್ವರಿತ ಚಿಕಿತ್ಸೆ, ಸಕ್ರಿಯ ಜ್ವರ ಸಮೀಕ್ಷೆ, ಶೀಘ್ರ ಪತ್ತೆ ತ್ವರಿತ ಚಿಕಿತ್ಸೆ ಮೂಲಕ ಜಿಲ್ಲೆಯಲ್ಲಿ ಮಲೇರಿಯಾ ನಿಯಂತ್ರಣ ಕಾರ್ಯಕ್ರಮ ಜಾರಿಯಲ್ಲಿದೆ ಎಂದು ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ವೈದ್ಯಾಧಿಕಾರಿಗಳಾದ ಡಾ.ವೆಂಕಟೇಶ್, ಡಾ.ಚಂದ್ರಶೇಖರ್ ಕಾಂಬ್ಳಿಮಠ, ಡಾ.ತುಳಸಿ ರಂಗನಾಥ್, ಡಾ.ಜಯಮ್ಮ ಮತ್ತಿತರರು ಇದ್ದರು.